ಬೆಂಗಳೂರು : ಇಂದಿನಿಂದ 10 ದಿನಗಳವರೆಗೆ ಕರ್ನಾಟಕ ವಿಧಾನ ಮಂಡಲದ ಬಜೆಟ್ ಅಧಿವೇಶನ ನಡೆಯತ್ತಿದ್ದು, ಅಧಿವೇಶನದ ಆರಂಭದ ದಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ಮಾದರಿಯಾಗಿವೆ ಎಂದು ಬಣ್ಣಿಸಿದರು.
ಅಧಿವೇಶನದ ಆರಂಭದ ದಿನ ಜಂಟಿ ಅಧಿವೇಶನ ಉದ್ದೇಶಿಸಿ ಇಂದು ಮಾತನಾಡಿದ ಅವರು, ಸರ್ಕಾರವು ನಡೆ ನುಡಿಗಳಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕ ಮಾದರಿಯನ್ನು ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅನುಸರಿಸುತ್ತಾ ಬಂದಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ ಎಂದು ಹೇಳಿದರು.
ಇಡೀ ದೇಶಕ್ಕೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಮಾದರಿಯಾಗಿವೆ. ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರಿಗೆ ತೃಪ್ತಿ ನೀಡಿವೆ ಎಂದು ಅವರು ಹೇಳಿದರು.ಆರ್ಥಿಕ ಅಸಮಾನತೆಯಿಂದ ಅಶಕ್ತರಾಗಿರುವ ಜನತೆಯ ಬದುಕಿಗೆ ಕೇವಲ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇದೆ. ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಎರಡು ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ.
ಬರಗಾಲವಿದ್ದರೂ ರಸ್ತೆ ನೀರು ಶಿಕ್ಷಣ ಆರೋಗ್ಯ ಕೃಷಿ ತೋಟಗಾರಿಕೆ ಹೈನುಗಾರಿಕೆ ಕೈಗಾರಿಕೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆದಿದ್ದಾಗಿದ್ದು ಬಜೆಟ್ ನಲ್ಲಿ 97 ರಷ್ಟು ಘೋಷಣೆಗಳಿಗೆ ಅಧಿಸೂಚನೆ ಹೊರಡಿಸಿದೆ. ಬರಪೀಡಿತ ಪ್ರದೇಶಗಳ ನೆರವಿಗೆ ಸರ್ಕಾರ ಅನುದಾನ ನೀಡಿದೆ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆಯನ್ನು ಘೋಷಿಸಿದೆ ಅಲ್ಲದೆ ಬೆಳೆ ಹಾನಿಗೆ ಕೂಡ ಪರಿಹಾರ ನೀಡಿದೆ ಎಂದು ತಿಳಿಸಿದರು.
ಕರ್ನಾಟಕ ಉದಯವಾಗಿ ಐವತ್ತು ವರ್ಷಗಳಾಗಿವೆ ಕರ್ನಾಟಕ ಸಂಭ್ರಮ 50 ಆಚರಣೆ ಮಾಡಲಾಗುತ್ತಿದೆ ನಮ್ಮ ಭಾಷೆ ಸಂಸ್ಕೃತಿಯ ಮೇಲೆ ದಾಳಿಯನ್ನು ಸಹಿಸುವುದಿಲ್ಲ ಕನ್ನಡ ಸಂಸ್ಕೃತಿ ಕಾಪಾಡಲು ಸರ್ಕಾರ ಸೂಕ್ತವಾದಂತಹ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಭವ್ಯ ಸ್ವಾಗತ ದೊರೆಯಿತು. ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ ದ್ವಾರದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮೈಸೂರು ಕರ್ನಾಟಿಕ್ ಬ್ಯಾಂಡ್, ಮೈಸೂರು ಇಂಗ್ಲಿಷ್ ಬ್ಯಾಂಡ್, ಮೌಂಟೆಡ್ ಲ್ಯಾನ್ಸ್ ಮೇನ್, ಮೌಂಟೆಡ್ ಹಾರ್ಸ್ ಎಸ್ಕಾರ್ಟ್, ಸಿಎಆರ್ ಪೊಲೀಸ್ ಬ್ಯಾಂಡ್ ಮೂಲಕ ಸ್ವಾಗತ ಕೋರಲಾಯಿತು. ರಾಜ್ಯಪಾಲ ಗೆಹ್ಲೋಟ್ರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ಈ ವೇಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇತರರು ಹಾಜರಿದ್ದರು.