ದಾವಣಗೆರೆ : ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ವಿರೋಧಿಸಿದರು. ನನಗೆ ಕಾನೂನು ಶಿಕ್ಷಣ ಪಡೆದು, ವಕೀಲನಾಗಿ, ಈಗ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅಂಬೇಡ್ಕರ್ ರವರ ಸಂವಿಧಾನ ನೀಡಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ದಾವಣಗೆರೆಯಲ್ಲಿ ಜಗದ್ಗುರು ಶ್ರೀ ಡಾ: ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಮಹೋತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಬೇರೂರಲು ವೈಚಾರಿಕ ಶಿಕ್ಷಣದ ಕೊರತೆ ಕಾರಣ ಎಂದರು.
ಚಲನರಹಿತವಾದ ಜಾತಿ ವ್ಯವಸ್ಥೆ ಬಲವಾಗಿ ಬೇರು ಬಿಟ್ಟಿರುವುದರಿಂದ ಬದಲಾವಣೆ ತರಲು ಇಂದಿಗೂ ಸಾಧ್ಯವಾಗಿಲ್ಲ. ದಾರ್ಶನಿಕರ ಪ್ರಯತ್ನದಿಂದಾಗಿ ಸ್ವಲ್ಪ ಸರಿಹೋಗುವ ಜಾತಿ ವ್ಯವಸ್ಥೆ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಬಸವಾದಿ ಶರಣರು’ ಇವನಾರವ, ಎನ್ನದೇ ಇವ ನಮ್ಮವ ಎಂದು ಭಾವಿಸುವಂತೆ ಹೇಳಿದ್ದರು ಎಂದರು.
ಉಪ್ಪಾರರು ಆರ್ಥಿಕವಾಗಿ, ಸಮಾಜಿಕವಾಗಿ ಹಿಂದುಳಿದಿರುವ ಸಮಾಜ. ಉಪ್ಪು ತಯಾರಿಸಿ ಮಾರಾಟ ಮಾಡುವ ವೃತ್ತಿಯಾಗಿದ್ದು, ಕೈಗಾರೀಕರಣವಾದ ನಂತರ ಅವರ ವೃತ್ತಿ ಬಿಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇವರ ಕಸುಬಿಗೆ ಧಕ್ಕೆಯುಂಟಾದ ಮೇಲೆ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ.
ಶಿಕ್ಷಣ, ಆರ್ಥಿಕ ಶಕ್ತಿಯಿಂದ ವಂಚಿತರಾಗಿ ಉದ್ಯೋಗವಿಲ್ಲದೇ ಕೂಲಿ ಮಾಡುವ ಸ್ಥಿತಿ ಉಂಟಾಯಿತು. ಆದರೆ ಉಪ್ಪಾರ ಸಮಾಜ ಮಹಾತ್ಮಾ ಗಾಂಧಿಜಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಉಪ್ಪಿನ ಸತ್ಯಾಗ್ರಹ ಮಾಡಿದರು ಅದರಲ್ಲಿ ಉಪ್ಪಾರರ ಕೊಡುಗೆಯೂ ಅಪಾರವಾಗಿತ್ತು ಎಂದರು.
ಜಾತಿ ವ್ಯವಸ್ಥೆಯ ಕಾರಣದಿಂದ ಅಕ್ಷರ ಸಂಸ್ಕೃತಿಯಿಂದ ಎಲ್ಲಾ ಶೂದ್ರರೂ ವಂಚಿತರಾಗಿದ್ದಾರೆ. ಆರ್ಥಿಕ, ಸಮಾಜಿಕ ಅಸಮಾನತೆ ಇದ್ದರೆ ಅದಕ್ಕೆ ನಮ್ಮ ದೇಶದ ಜಾತಿ ವ್ಯವಸ್ಥೆ ಕಾರಣ. ಸಂವಿಧಾನದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕೆಂದು ಹೇಳಿದೆ. ಶೋಷಣೆಗೊಳಗಾದ ಜನರಿಗೆ ಆರ್ಥಿಕ, ಸಮಾಜಿಕ ಶಕ್ತಿ ತುಂಬಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.