ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹೊರವಲಯದಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕುಟುಂಬದ ಒಡೆತನದ ಸಿದ್ದಸಿರಿ ಸಕ್ಕರೆ ಹಾಗೂ ಎಥನಾಲ್ ಘಟಕ ಮುಚ್ಚುವ ಸಂಬಂಧ ಅಭಿಪ್ರಾಯ ತಿಳಿಸುವಂತೆ ಯತ್ನಾಳ ಅವರ ಪುತ್ರರೂ ಆದ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ.ಪಾಟೀಲ್ ಅವರಿಗೆ ಹೈಕೋರ್ಟ್ ಸೂಚಿಸಿದೆ.
ಸಿದ್ದಸಿರಿ ಎಥನಾಲ್ ಮತ್ತು ಪವರ್ಘಟಕ ಮುಚ್ಚುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ ಪಿಸಿಬಿ) ಕಲಬುರಗಿ ವಲಯದ ಅಧಿಕಾರಿಗಳು ನೀಡಿದ್ದ ನೋಟಿಸ್ ರದ್ದು ಕೋರಿ ರಮಣಗೌಡ ಬಿ.ಪಾಟೀಲ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಾಜರಾದ ವಕೀಲ ವೆಂಕಟೇಶ್ ದಳವಾಯಿ, ರಾಜಕೀಯ ಕಾರಣಕ್ಕಾಗಿ ಘಟಕ ಮುಚ್ಚಲು ಒತ್ತಾಯಿಸಲಾಗುತ್ತಿದೆ. ಕಾರ್ಖಾನೆಗೆ ಕಾರ್ಯ ನಿರ್ವಹಣೆಗೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ. ಹಾಗಾಗಿ, ಕೆಎಸ್ಪಿಸಿಬಿ ನೋಟಿಸ್ ರದುಪಡಿಸಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಕಾರ್ಖಾನೆಯನ್ನು ನಿಯಮದ ಪ್ರಕಾರವಾಗಿ ನಡೆಸಲಾಗುತ್ತಿಲ್ಲ. ಹೀಗಾಗಿ, ಕ್ರಮ ಕೈಗೊಳ್ಳಲಾಗಿದೆಯಷ್ಟೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು 2021ರಲ್ಲಿ ಕಾರ್ಖಾನೆ ಖರೀದಿಸಿದ್ದೀರಿ, ಈಗ 2024ರಲ್ಲಿದ್ದೇವೆ.
ಈ ಅವಧಿಯಲ್ಲಿ ನೀವು ಅಗತ್ಯ ಅನುಮತಿ ಪಡೆಯಬೇಕಿತ್ತು. ಕಾನೂನಿನ ಪ್ರಕಾರ ನೀವು ಅನುಮತಿ ಪಡೆಯುವವರೆಗೆ ಕಾರ್ಖಾನೆ ನಡೆಸಲಾಗದು. ಒಂದೊಮ್ಮೆ ಸರ್ಕಾರದಿಂದ ಅನುಮತಿ ಪಡೆಯುವರೆಗೂ ಕಾರ್ಖಾನೆ ನಡೆಸುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟರೆ, ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಲಿದೆ ಎಂದು ಅಭಿಪ್ರಾಯಪಟ್ಟಿತು.