ಕೊಡಗು: ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಕೊಡಗಿನಲ್ಲಿ ಅಧಿಕವಾಗಿದ್ದು ದಶಕಗಳ ಕಾಲದಿಂದ ಉಳಿದಿದ್ದ ಈ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸನ್ನಿಹಿತ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು. ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿರೋದಾಗಿ ತಿಳಿಸಿದ್ದಾರೆ.
ಕೊಡಗಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಪ್ರಸ್ತುತ ರಾಜ್ಯಾದ್ಯಂತ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಒಟ್ಟಾರೆ 1,32,618. ಈ ಪೈಕಿ ಕೊಡಗಿನಲ್ಲೇ ಸುಮಾರು 60,000ಕ್ಕೂ ಹೆಚ್ಚಿನ ಪ್ರಕರಣಗಳಿವೆ” ಎಂದು ವಿಷಾಧಿಸಿದರು.
ಸಮಸ್ಯೆಯ ಕಾರಣಗಳ ಕುರಿತು ಸಭೆಯಲ್ಲಿ ಚರ್ಚಿಸಿದ ಅವರು, “ಸೋಮವಾರ ಪೇಟೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಸರ್ಕಾರಿ ಮಂಜೂರು ಭೂಮಿ ಇದ್ದರೆ, ಉಳಿದ ತಾಲೂಕುಗಳಲ್ಲಿ ಜಮಾ ಬಾಣೆ ಭೂಮಿ ಹೆಚ್ಚಿದೆ. ಹೀಗಾಗಿ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ.
ಈ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಸ್ಥಳೀಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ವಿಶೇಷ ಆದ್ಯತೆಯ ಮೇಲೆ ಕೆಲಸ ನಿರ್ವಹಿಸುವ ತುರ್ತು ಇದೆ. ಸಂಬಂಧಿತ ಕಂದಾಯ ಮತ್ತು ಸರ್ವೇ ಇಲಾಖೆ ಹಿರಿಯ ಅಧಿಕಾರಿಗಳು ಈಗಲೇ ಕೊಡಗಿಗೆ ತೆರಳಿ ಸರ್ವೇ ತಯಾರಿ ಕೆಲಸ ಆರಂಭಿಸಬೇಕು. ಲೈಸೆನ್ಸ್ ಸರ್ವೇಯರ್ ಗಳ ಸಹಾಯ ಪಡೆದುಕೊಳ್ಳಿ. ಗ್ರಾಮ ಲೆಕ್ಕಿಗರಿಗೂ ಸರ್ವೇ ತರಬೇತಿ ನೀಡಿ.
ಈ ಕೆಲಸಕ್ಕೆ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಿಕೊಳ್ಳಿ. ಕಂದಾಯ ಇಲಾಖೆ ಅಧಿಕಾರಿಗಳು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಸರ್ವೇ ಕೆಲಸವನ್ನು ಮುಂದಿನ 60 ದಿನಗಳಲ್ಲಿ ಪೂರೈಸಬೇಕು. ಕಂದಾಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಬೇಕು” ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.