ಅಹಮದಾಬಾದ್: ಇಬ್ಬರು ಯುವತಿಯರನ್ನು ಅಕ್ರಮವಾಗಿ ತನ್ನ ಆಶ್ರಮದಲ್ಲಿ ಇಟ್ಟುಕೊಂಡಿರುವ ಆರೋಪ ಎದುರಿಸುತ್ತಿದ್ದ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಗೆ ಗುಜರಾತ್ ಹೈಕೋರ್ಟ್ ಕ್ಲೀನ್ಚಿಟ್ ನೀಡಿದೆ ಎಂದು ತಿಳಿಬಂದಿದೆ.
ಅಲ್ಲದೆ ಇಬ್ಬರು ಯುವತಿಯರನ್ನು ಆತನ ವಶದಿಂದ ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಯುವತಿಯರ ತಂದೆಯ ವಾದವನ್ನು ತಿರಸ್ಕರಿಸಿದೆ.ಆ ಮೂಲಕ ಯುವತಿಯರನ್ನು ಅಕ್ರಮ ವಶದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿತ್ಯಾನಂದಗೆ ಗುಜರಾತ್ ಹೈಕೋರ್ಟ್ ಕ್ಲೀನ್ ಚಿಟ್ ನೀಡುವ ಮೂಲಕ ನಿರಾಳವಾಗುವಂತೆ ಮಾಡಿದೆ.
ಏನಿದು ಪ್ರಕರಣ?: ‘ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ನಿತ್ಯಾನಂದನ ಅಹಮದಾ ಬಾದ್ ಆಶ್ರಮದಲ್ಲಿ ಅಕ್ರಮವಾಗಿ ಬಂಧಿಸಿಡಲಾಗಿದೆ. ನಿತ್ಯಾನಂದ ದೇಶದಿಂದ ಪರಾರಿಯಾದ ಬಳಿಕ ಅವರನ್ನೂ ಅಪಹರಿಸಿ ಕರೆದೊಯ್ಯಲಾಗಿದೆ’ ಎಂದು 2019ರಲ್ಲಿ ಜನಾರ್ಧನ ಶರ್ಮಾ ಎಂಬುವವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆ ಹೆಣ್ಣುಮಕ್ಕಳೊಂದಿಗೆ ವಿಡಿಯೋ ಕಾಲ್ನಲ್ಲಿ ಕೋರ್ಟ್ ಸಂವಹನ ನಡೆಸಿತ್ತು. ಆಗ ಅವರು ‘ನಾವು ನಮ್ಮಿಷ್ಟದಂತೆ ಆಧ್ಯಾತ್ಮಿಕವಾಗಿ ಸಂತೋಷವಾಗಿ ಜೀವಿಸುತ್ತಿದ್ದೇವೆ. ಯಾರೂ ನಮ್ಮನ್ನು ಬಂಧಿಸಿಲ್ಲ’ ಎಂದಿದ್ದರು. ಹೀಗಾಗಿ ಇಬ್ಬರೂ ಯುವತಿಯರು ಪ್ರಾಪ್ತ ವಯಸ್ಸಿನವರಾಗಿದ್ದು, ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಲು ಅವರು ಸಮರ್ಥರಾಗಿದ್ದಾರೆ ಎಂದು ನ್ಯಾಯಾಲಯವು ತಿಳಿಸಿದೆ.