ಮಂಗಳೂರು: ಎರಡು ತಿಂಗಳಿಂದ ರಿಬ್ಬ್ಡ್ ಸ್ಮೋಕ್ಡ್ ಶೀಟ್ ದರ್ಜೆಯ ರಬ್ಬರ್ ಧಾರಣೆ ಏರುತ್ತಿದೆ.ಒಂದು ಕೆ.ಜಿಗೆ ರೂ 147ರಿಂದ ರೂ 148ರ ಆಸುಪಾಸಿನಲ್ಲಿದ್ದ ಬೆಲೆಯು ಒಂದು ವಾರದಿಂದ ರೂ 161ಕ್ಕೆ ತಲುಪಿದ್ದು ರಾಜ್ಯದ ಬೆಳೆಗಾರರಲ್ಲಿ ಖುಷಿ ಮೂಡಿಸಿದೆ. ಇದರ ನಡುವೆಯೇ ಎಷ್ಟು ದಿನಗಳವರೆಗೆ ಈ ಬೆಲೆ ಇರಲಿದೆ ಎಂಬ ಪ್ರಶ್ನೆಯೂ ಕಾಡತೊಡಗಿದೆ.
ಬೆಳೆಗಾರರ ಪ್ರಕಾರ ದಶಕದ ಹಿಂದೆ ರಾಜ್ಯದಲ್ಲಿ ರಬ್ಬರ್ ಧಾರಣೆಯು ಕೆ.ಜಿಗೆ ರೂ 240 ಆಗಿತ್ತು. ನಂತರ ಬೆಲೆ ಕುಸಿಯುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ₹200ರ ಆಸುಪಾಸು ತಲುಪಿದ್ದೇ ಇಲ್ಲ. ಆದ್ದರಿಂದ ಈಗಿನ ದಾರಣೆ ಸಮಾಧಾನಕರ ಎನಿಸಿದರೂ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ ಎಂಬುದು ಅವರ ಅಭಿಪ್ರಾಯ.
ಹೀಗಾಗಿ, ಕೇರಳದಂತೆ ಕರ್ನಾಟಕದಲ್ಲೂ ಬೆಂಬಲ ಬೆಲೆ ನೀಡಬೇಕೆಂಬುದು ಬೆಳೆಗಾರರ ಒತ್ತಾಯವಾಗಿದೆ.ರಬ್ಬರ್ನಲ್ಲಿ ಅತ್ಯುತ್ತಮ ಗುಣಮಟ್ಟದ್ದು ಆರ್ಎಕ್ಸ್ ದರ್ಜೆ. ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಆರ್ಎಸ್ಎಸ್–4. ರಬ್ಬರ್ ಮಂಡಳಿಯ 2016ರ ಅಂದಾಜಿನ ಪ್ರಕಾರ ಇದರ ಉತ್ಪಾದನಾ ವೆಚ್ಚ ಕೆ.ಜಿಗೆ ರೂ 178. ಆದರೆ, ಈಗ ಸುಮಾರು ರೂ 240 ವೆಚ್ಚ ತಗಲುತ್ತದೆ. ಹೀಗಾಗಿ ಕೆ.ಜಿಗೆ ₹ 260 ಸಿಕ್ಕಿದರೆ ಲಾಭ ಆಗುತ್ತದೆ. ಸದ್ಯ ರೂ 161 ಸಿಗುತ್ತಿರುವುದು ಸ್ವಲ್ಪ ಸಮಾಧಾನ ಎನ್ನುತ್ತಾರೆ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಪಕಳಕುಂಜ ಗೋಪಾಲಕೃಷ್ಣ ಭಟ್.
ವಾರ್ಷಿಕ 11 ಲಕ್ಷ ಟನ್ ನೈಸರ್ಗಿಕ ರಬ್ಬರ್ಗೆ ದೇಶದಲ್ಲಿ ಬೇಡಿಕೆ ಇದೆ. ಅಷ್ಟು ಉತ್ಪಾದನೆ ಆಗುತ್ತಿಲ್ಲ. ಕೊರತೆ ನೀಗಿಸಲು ಮಲೇಷ್ಯಾ ಮತ್ತಿತರ ಕಡೆಗಳಿಂದ ‘ಬ್ಲಾಕ್ ರಬ್ಬರ್’ ಅನ್ನು ಆಮದು ಮಾಡಲಾಗುತ್ತಿದೆ. ಅದು ಸುಲಭವಾಗಿ ಬೆಳೆಯುವ ರಬ್ಬರ್. ದೇಶದಲ್ಲಿ ಗುಣಮಟ್ಟದ ರಬ್ಬರ್ ಬೆಳೆಯುವವರು ಇದ್ದರೂ ನಿರೀಕ್ಷಿತ ಬೆಲೆ ಸಿಗದ ಕಾರಣ ಈ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ದಕ್ಷಿಣ ಕನ್ನಡದ ಸುಳ್ಯದ ಗುಡ್ಡ ಪ್ರದೇಶಗಳಲ್ಲಿ ಅತಿಹೆಚ್ಚು ರಬ್ಬರ್ ಬೆಳೆಯುತ್ತಿದ್ದು ಮಾಣಿಲ, ವಿಟ್ಲ ಮತ್ತಿತರ ಕಡೆಗಳಲ್ಲೂ ಉತ್ತಮ ಬೆಳೆ ಇದೆ. ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ ಭಾಗದಲ್ಲೂ ರಬ್ಬರ್ ಬೆಳೆಗಾರರು ಇದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆ ಇದೆ. ಆದರೆ, ಬೇರೆ ಬೇರೆ ಸಮಸ್ಯೆಗಳಿಂದ ರಬ್ಬರ್ ತೋಟಗಳು ಅಡಿಕೆ ತೋಟಗಳಾಗಿ ಪರಿವರ್ತನೆಯಾಗಿವೆ.
‘