ಬೆಂಗಳೂರು : ಕಳೆದ ವರ್ಷ ರಾಜ್ಯದಲ್ಲಿ ಮಳೆ ಬಾರದೆ ರೈತರು ಸೇರಿದಂತೆ ಎಲ್ಲರು ತೀವ್ರ ಸಂಕಷ್ಟ ಎದುರಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕುಸಿಯುತ್ತಿರುವ ಅಂತರ್ಜಲ ಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಸಮಗ್ರ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ತಜ್ಞರು ತೀರ್ಮಾನಿಸಿದ್ದಾರೆ.
ಅಂತರ್ಜಲ ಮಟ್ಟ ಸುಧಾರಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದ ಹಿನ್ನೆಲೆಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಲಾನಯನ ನಿರ್ವಹಣೆಯ ಉತ್ಕೃಷ್ಟ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಂತರ್ಜಲದ ಸಮರ್ಪಕ ಬಳಕೆಗಾಗಿ ಸೂಕ್ತ ನೀರಾವರಿ ತಂತ್ರಜ್ಞಾನ ಅಳವಡಿಕೆ, ರೈತರಿಗೆ ನೀರಿನ ಸದ್ಬಳಕೆ ಕುರಿತು ಶಿಕ್ಷಣ, ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಒಗ್ಗೂಡಿಸುವುದು, ಅವಶ್ಯಕತೆಗೆ ಅನುಗುಣವಾಗುವ ಮಳೆ ನೀರು ಮತ್ತು ಅಂತರ್ಜಲ ಬಳಕೆ ಮಾಡುವುದು, ರೈತರಲ್ಲಿ ಸಹಭಾಗಿತ್ವ ನೀರಿನ ನಿರ್ವಹಣೆ ಪದ್ಧತಿಯನ್ನು ಅಳವಡಿಸುವಂತೆ ಮಾಡಿ ಅವರಲ್ಲಿ ಒಡೆತನದ ಜವಾಬ್ದಾರಿ ತರುವುದು,
ಚೆಕ್ ಡ್ಯಾಮ್, ಇಂಗು ಗುಂಡಿನಿರ್ಮಾಣ, ಹನಿಮತ್ತು ತುಂತುರು ನೀರಾವರಿ, ಸೂಕ್ತ ಬೆಳೆಗಳ ಆಯ್ಕೆ, ಬೆಳೆ ಹೊದಿಕೆ ಅಳವಡಿಸುವ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತ.ಕಾರ್ಯಾಗಾರದಲ್ಲಿ ಜಲಾನಯನ ಅಭಿವೃದ್ದಿ ಇಲಾಖೆ ಆಯುಕ್ತ ಗಿರೀಶ್, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ. ಎಸ್.ರಮೇಶ್, ಉಪ ಅರಣ್ಯಾಧಿಕಾರಿ ರುದ್ರನ್ ಮತ್ತಿತರರು ಪಾಲ್ಗೊಂಡಿದ್ದರು.