ಬೆಂಗಳೂರು : ನಗರ ಸಂಚಾರ ಪೊಲೀಸರು ನಗರದ ಶಾಲಾ-ಕಾಲೇಜುಗಳ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ದ ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದು, ಗುರುವಾರವೂ 1,896 ಪ್ರಕರಣ ದಾಖಲಿಸಿ 9.48 ಲಕ್ಷ ದಂಡ ವಸೂಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಶಾಲಾ-ಕಾಲೇಜುಗಳ ಸುತ್ತ ಮುತ್ತಲ ರಸ್ತೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಪ್ರತಿ ಸಂಚಾರ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸುತ್ತಮುತ್ತಲ ರಸ್ತೆಗಳಲ್ಲಿ ವಿಶೇಷ ಕಾಲ್ಯಾಚರಣೆ ಕೈಗೊಂಡು ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುತ್ತಿದ್ದಾರೆ.
ಗುರುವಾರ ನಗರದಲ್ಲಿ ನಡೆದ ವಿಶೇಷ ಕಾರ್ಯಾಚರಣೆ ವೇಳೆ ಹೆಲೈಟ್ ರಹಿತ ಸವಾರಿ 1,279 ಪ್ರಕರಣ, ಟ್ರಿಪಲ್ ರೈಡಿಂಗ್ 85, ನೋ ಎಂಟ್ರಿ 455, ಪಾದಾಚಾರಿ ಮಾರ್ಗದಲ್ಲಿ ಚಾಲನೆ 77 ಸೇರಿ ಒಟ್ಟು 1,896 ಪ್ರಕರಣ ದಾಖಲಿಸಲಾಗಿದೆ. ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳ ಬಳಿ ಸಂಚಾರ ನಿಯಮ ಪಾಲಿಸದ ಸವಾರರ ವಿರುದ್ದ 639 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಓರ್ವ ಸವಾರ ಅಪ್ರಾಪ್ತನಾಗಿದ್ದು, ಆತನ ಪೋಷಕರು ಹಾಗೂ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.