ನವದೆಹಲಿ: ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಗೆ ಆಹಾರ, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಪಾರ್ಕಿಂಗ್ ಮತ್ತು ವಿಶ್ರಾಂತಿ ಸೌಲಭ್ಯಗಳೊಂದಿಗೆ ಆಧುನಿಕ ಕಟ್ಟಡಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಹೊಸ ಯೋಜನೆಯನ್ನು ರೂಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಮೊದಲ ಹಂತದಲ್ಲಿ ಇಂತಹ 1,000 ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2024 ಅನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು.
ಹೊಸ ಸೌಲಭ್ಯಗಳು ಟ್ರಕ್ ಮತ್ತು ಟ್ಯಾಕ್ಸಿ ಚಾಲಕರಿಗೆ ಜೀವನವನ್ನು ಸುಲಭಗೊಳಿಸಲು ಮತ್ತು ಪ್ರಯಾಣಿಸಲು ಸುಲಭವಾಗುವಂತೆ ಉತ್ತೇಜನ ನೀಡುತ್ತದೆ. ಆ ಮೂಲಕ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಅಪಘಾತಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
“ಟ್ರಕ್ ಚಾಲಕರು ಮತ್ತು ಅವರ ಕುಟುಂಬಗಳ ಕಾಳಜಿಯನ್ನು ಸರ್ಕಾರ ಅರ್ಥಮಾಡಿಕೊಂಡಿದೆ” ಎಂದು ಟ್ರಕ್ ಚಾಲಕರು ಎದುರಿಸುತ್ತಿರುವ ಕಷ್ಟಗಳನ್ನು ಎತ್ತಿ ತೋರಿಸಿದರು.
ವ್ಯಾಪಾರವನ್ನು ವೇಗಗೊಳಿಸುವಲ್ಲಿ ಮತ್ತು ರಾಜ್ಯ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ರದ್ದುಗೊಳಿಸುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯ ಪರಿವರ್ತಕ ಪರಿಣಾಮವನ್ನು ಮೋದಿ ಎತ್ತಿ ತೋರಿಸಿದರು.
“ಫಾಸ್ಟ್ಯಾಗ್ ತಂತ್ರಜ್ಞಾನವು ಉದ್ಯಮದಲ್ಲಿ ಇಂಧನ ಮತ್ತು ಸಮಯದ ಉಳಿತಾಯವನ್ನು ಸುಗಮಗೊಳಿಸುತ್ತಿದೆ” ಎಂದು ಅವರು ಹೇಳಿದರು.
ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಪ್ರಧಾನಿ, ಫಾಸ್ಟ್ಯಾಗ್ ತಂತ್ರಜ್ಞಾನವು ಆರ್ಥಿಕತೆಗೆ ವಾರ್ಷಿಕ 40,000 ಕೋಟಿ ರೂ.ಗಳ ಲಾಭವನ್ನು ನೀಡುತ್ತಿದೆ ಎಂದರು.