ಬೆಂಗಳೂರು : ರಾಜ್ಯದ ರೈತರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಹಕಾರ ಸಂಘಗಳ ಮೂಲಕ ರೈತರು ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ.ಈ ಮೂಲಕ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವ ಹಾಗಾಗಿದೆ.
ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ತುಸು ರಿಲೀಫ್ ನೀಡಲು ಕೈಗೊಂಡಿರುವ ಈ ನಿರ್ಧಾರವು ಪ್ರಾಥಮಿಕ ಸಹಕಾರ ಸಂಘ, ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಗಳು (ಪಿಕಾರ್ಡ್) ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಲ್ಲಿನ ಸುಸ್ತಿ ಸಾಲಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.
ಸಾಲಗಳ ಅಸಲು ಪಾವತಿಸಿದರೆ ಅದರ ಮೇಲಿನ ಬಡ್ಡಿ ಮನ್ನಾ ಆಗಲಿದೆ. ರೈತರು ಈ ಬಡ್ಡಿ ಮನ್ನಾ ಸೌಲಭ್ಯ ಪಡೆಯಬೇಕಾದರೆ ಇದೇ ತಿಂಗಳ 29 ರೊಳಗೆ ಸಾಲಗಳ ಅಸಲು ಮರುಪಾವತಿಸಬೇಕಿದೆ. 2023ರ ಡಿಸೆಂಬರ್ 31ಕ್ಕೆ ಸುಸ್ತಿಯಾಗಿರುವ ರೈತರ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಅನ್ವಯವಾಗುವಂತೆ ಕಳೆದ ಜ.20 ರಂದು ಸರಕಾರ ಆದೇಶ ಹೊರಡಿಸಿದೆ. ಈ ಕ್ರಮಕ್ಕೆ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿತು. ಈ ತೀರ್ಮಾನದಿಂದ ಕೃಷಿ ಸಾಲಗಳ ಮೇಲಿನ ಒಟ್ಟು 440.20 ಕೋಟಿ ರೂ. ಸುಸ್ತಿ ಬಡ್ಡಿ ಮನ್ನಾ ಆಗಲಿದೆ ಎಂದು ತಿಳಿದುಬಂದಿದೆ.
6 ಶೀತಲ ಗೃಹ ನಿರ್ಮಾಣ:
ನಬಾರ್ಡ್ ನೆರವಿನೊಂದಿಗೆ 6 ಜಿಲ್ಲೆಗಳಲ್ಲಿ ತಲಾ ಒಂದೊಂದು ಬಹುಉತ್ಪನ್ನ ಶೀತಲಗೃಹಗಳನ್ನು ಒಟ್ಟು 65.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು. ಈ ಮೂಲಕ ಒಟ್ಟು 14,000 ಟನ್ ಆಹಾರಧಾನ್ಯಗಳ ಸಂಗ್ರಹಕ್ಕೆ ಅನುಕೂಲ ವಾಗಲಿದ್ದು, ಆಲೂಗಡ್ಡೆ, ಮೆಣಸಿನಕಾಯಿ, ಶುಂಠಿ, ಅರಿಶಿಣ, ಕರಿಮೆಣಸು, ನಿಂಬೆ, ಒಣದ್ರಾಕ್ಷಿ, ಕೊತ್ತಂಬರಿ ಮತ್ತಿತರ ವಸ್ತುಗಳ ಸಂಗ್ರಹಕ್ಕೆ ಸಾಧ್ಯವಾಗಲಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಫಾರಂ,
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಾವೇನಹಳ್ಳಿ, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮರುಕನಹಳ್ಳಿ, ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕಾಳೇನಹಳ್ಳಿ, ವಿಜಯಪುರದ ಅರಕೆರೆ ಮತ್ತು ಹಾಸನದ ಸಂತೇಪೇಟೆಯ ಎಪಿಎಂಸಿ ಯಾರ್ಡ್ನಲ್ಲಿ ಈ ಶೀಥಲಗೃಹಗಳು ನಿರ್ಮಾಣವಾಗಲಿವೆ.
ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲು:
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ ಪ್ರತಿಭಾವಂತ ಕ್ರೀಡಾಪಟುಗಳಿಗೆ ರಾಜ್ಯ ನಾಗರಿಕ ಸೇವೆಗಳ ನೇರ ನೇಮಕಾತಿಗಳಲ್ಲಿ ಶೇ.2ರಷ್ಟು ಹುದ್ದೆಗಳಿಗೆ ಮೀಸಲು ಕಲ್ಪಿಸುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿತು. ಕ್ರೀಡಾಪಟುಗಳನ್ನು ಉತ್ತೇಜಿಸಲು ಕೈಗೊಂಡಿರುವ ಈ ತೀರ್ಮಾನದಂತೆ ‘ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು -1977ರ ನಿಯಮ-9ಕ್ಕೆ ತಿದ್ದುಪಡಿ ತಂದು ಆಕ್ಷೇಪಣೆ ಆಹ್ವಾನಿಸಬೇಕು. ಬಳಿಕ ನಿಯಮ ಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಬಹುದು. ಅಗತ್ಯವಾದರೆ, ಕರಡು ನಿಯಮಗಳನ್ನು ಮತ್ತೊಮ್ಮೆ ಸಂಪುಟದ ಅನುಮೋದನೆಗೆ ತರಬಹುದು ಎಂದು ನಿರ್ಧರಿಸಲಾಯಿತು.
ಸಂಪುಟದ ಇನ್ನಿತರ ಪ್ರಮುಖ ತೀರ್ಮಾನಗಳು
1) 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ ಒಟ್ಟು 104 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ 60 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿ ಪ್ರಸ್ತಾವನೆಗೆ ಅನುಮೋದನೆ.
2) ರಾಜ್ಯದ 6 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲು ನಿರ್ಧಾರ. ಮಹತ್ವಾಕಾಂಕ್ಷಿ ತಾಲ್ಲೂಕುಗಳಾದ ರಾಯಚೂರು, ಬಳ್ಳಾರಿ ಮತ್ತು ವಿಜಯಪುರದಲ್ಲಿ ಒಟ್ಟು 52.81 ಕೋಟಿ ರೂ. ವೆಚ್ಚದಲ್ಲಿ ಹಾಗೂ ಬೆಂಗಳೂರಿನ ಹೊಸೂರು ರಸ್ತೆ, ಕಲಬುರಗಿ, ಮೈಸೂರಿನ ಸರಕಾರಿ ಐಟಿಐಗಳನ್ನು 47.18 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ತೀರ್ಮಾನ.
3) ವಿವಾಹ ನೋಂದಣಿ ಸುಸೂತ್ರ ವಿವಾಹ ನೋಂದಣಿ ಇನ್ನು ಸುಲಭವಾಗಿದ್ದು, ಕಾವೇರಿ -2 ತಂತ್ರಾಂಶದಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸುವ ‘ಹಿಂದೂ ವಿವಾಹಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024’ ಅನ್ನು ಸಚಿವ ಸಂಪಟ ಸಭೆ ಅನುಮೋದಿಸಿತು. ಇದರಿಂದಾಗಿ ವಿವಾಹ ನೋಂದಣಿಗೆ ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ -1 ಕೇಂದ್ರಗಳಲ್ಲಿಯೂ ಅವಕಾಶ ಕಲ್ಪಿಸಲಾಗುತ್ತಿದೆ.
4) ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ 142.47 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.
5) ರಾಯಚೂರು ವಿಶ್ವವಿದ್ಯಾಲಯ ಆವರಣದಲ್ಲಿ 47.32 ಕೋಟಿ ರೂ. ವೆಚ್ಚದಲ್ಲಿ ‘ಮಾನವ ಜಿನೋಮ್ ಅಧ್ಯಯನ ಸಂಸ್ಥೆ’ ನಿರ್ಮಾಣಕ್ಕೆ ನಿರ್ಧಾರ. ಈ ಉದ್ದೇಶಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ಬಳಸಲು ತೀರ್ಮಾನ.
6) ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ವೈದ್ಯಕೀಯ ಕಾಲೇಜು, ಹಾಸ್ಟೆಲ್ ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಲು 499 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅಡಳಿತಾತ್ಮಕ ಒಪ್ಪಿಗೆ.
7) ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ವೈದ್ಯಕೀಯ ಕಾಲೇಜು, ವಸತಿಗೃಹಗಳು ಮತ್ತಿತರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಷ್ಕೃತ ಅಂದಾಜು ಮೊತ್ತ 455 ಕೋಟಿ ರೂ.ಗಳಿಗೆ ಅಡಳಿತಾತ್ಮಕ ಅನುಮೋದನೆ.
8) ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಆವರಣಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತಿತರ ಕಟ್ಟಡ ನಿರ್ಮಾಣ ಸಂಬಂಧ 150 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.