ಬೆಳಗಾವಿ : ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಬೆಳಗಾವಿ ತಾಲೂಕಿನ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆಗೆ ಕಾರಣೀಕರ್ತರಾದಂತಹ ಮಹಿಳೆಯ ಮಗ ಹಾಗೂ ಹಲ್ಲೆ ಮಾಡಿದವರ ಮಗಳು ಇಬ್ಬರು ಪ್ರೇಮಿಗಳ ವಿವಾಹವನ್ನು ಇದೀಗ ಪೊಲೀಸರು ನೆರವೇರಿಸಿದ್ದಾರೆ.
ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಲಾಗಿದೆ. ಡಿ.10ರಂದು ಯುವಕನ ತಾಯಿಯನ್ನು ಯುವತಿಯ ಕಡೆಯವರು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಬಳಿಕ ಬೆಳಗಾವಿ ಜಿಲ್ಲಾ ಪೊಲೀಸರು ಪ್ರೇಮಿಗಳನ್ನು ರಕ್ಷಣೆ ಮಾಡಿದ್ದರು. ಇದೀಗ ಉಪನೋಂದಣಿ ಕಚೇರಿಯಲ್ಲಿ ಕಾನೂನು ಪ್ರಕಾರ ವಿವಾಹ ಮಾಡಿಸಿದ್ದಾರೆ.
ದುಂಡಪ್ಪ ಅಶೋಕ ನಾಯಕ್ ಎಂಬ ವಂಟಮೂರಿ ಗ್ರಾಮದ ಯುವಕ, ಪ್ರಿಯಾಂಕಾ ಬಸಪ್ಪ ನಾಯಕ್ ಎಂಬ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಪೋಷಕರು ಇವರ ಪ್ರೀತಿಯನ್ನು ತಿರಸ್ಕರಿಸಿ ಯುವತಿಗೆ ಬೇರೊಬ್ಬರ ಜೊತೆ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಯುವತಿಯ ನಿಶ್ಚಿತಾರ್ಥದ ಹಿಂದಿನ ದಿನ ಇಬ್ಬರೂ ಪರಾರಿ ಆಗಿದ್ದರು. ಮಗಳು ಯುವಕನ ಜೊತೆ ಓಡಿ ಹೋದ ವಿಚಾರ ತಿಳಿಯುತ್ತಿದ್ದಂತೆ ಯುವತಿ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ದೌರ್ಜನ್ಯವೆಸಗಿದ್ದರು.
ಇನ್ನು ಮಹಿಳೆಯನ್ನು ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಕಾಕತಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲೂ ಈ ಘಟನೆ ಪ್ರಸ್ತಾಪವಾಗಿತ್ತು. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಇತ್ತೀಚೆಗೆ ಪ್ರೀತಿ ಮಾಡಿ ಮದುವೆ ಆಗುವುದು ಜಾಸ್ತಿ ಆಗಿದೆ. ಅದಕ್ಕೆ ಪೋಷಕರು ವಿರೋಧ ಮಾಡುತ್ತಾರೆ. ಆದರೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದರು.