ಚಾಮರಾಜನಗರ : 2021ರ ಮೇ.2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೊರೋನಾ ರೋಗಿಗಳು ಸೇರಿದಂತೆ 36 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈಗ 32 ಕುಟುಂಬದ ಸದಸ್ಯರಿಗಷ್ಟೆ ಉದ್ಯೋಗ ಕೊಡಲೂ ಮುಂದಾಗಿದ್ದು, ಸ್ವಲ್ಪ ಮಟ್ಟಿಗೆ ಕುಟುಂಬಗಳು ಸಮಾಧಾನವಾಗಿವೆ. ಇನ್ನುಳಿದಿರುವ ನಾಲ್ಕು ಕುಟುಂಬಕ್ಕೂ ಕೆಲಸ ಕೊಡುವಂತೆ ಜಿಲ್ಲಾಡಳಿತ ಬಳಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರ ಆಕ್ಸಿಜನ್ ಸಂತ್ರಸ್ತ ಕುಟುಂಬಗಳಿಗೆ ಗುತ್ತಿಗೆ ನೌಕರಿ ಕೊಡುವ ಮೂಲಕ ಗುಡ್ ನ್ಯೂಸ್ ಕೊಟ್ಟಿದೆ. 32 ಕುಟುಂಬಗಳಿಗಷ್ಟೇ ಉದ್ಯೋಗ ದೊರಕಿಸಿಕೊಟ್ಟಿದ್ದು, ಇನ್ನೂ ನಾಲ್ಕು ಕುಟುಂಬಗಳು ನಮ್ಮ ಮನೆಯವರು ತೀರಿಕೊಂಡಿದ್ದಾರೆ. ನಾವೂ ಇಲ್ಲಿಯವರೆಗೂ ಹೋರಾಟ ನಡೆಸಿದ್ದೇವೆ. ಜಿಲ್ಲಾಡಳಿತ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ. ನಮಗೂ ಕೂಡ ಕೆಲಸ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕಾಯಂ ಉದ್ಯೋಗದ ಬದಲು ಈಗ ಗುತ್ತಿಗೆ ಆಧಾರದ ಮೇಲೆ 32 ಮಂದಿಗೆ ಕೆಲಸ ನೀಡಲಾಗುತ್ತಿದೆ. ಮೊದಲಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಡುಗೆ ಕೆಲಸ ನೀಡುವುದಾಗಿ ಆಫರ್ ನೀಡಲಾಗಿತ್ತು. ಇದಕ್ಕೆ ಸಂತ್ರಸ್ತ ಕುಟುಂಬಸ್ಥರು ಒಪ್ಪಿರಲಿಲ್ಲ. ಇದೀಗ ಬೇರೆ ಬೇರೆ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿದ್ದು, ಫೆ.1 ರಿಂದ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತರು ನಮಗೆ ಗುತ್ತಿಗೆ ಆಧಾರದ ಕೆಲಸ ಸ್ವಲ್ಪ ಸಮಾಧಾನ ತಂದಿದೆ, ವಿಧಿ ಇಲ್ಲದೆ ಒಪ್ಪಿಕೊಂಡಿದ್ದೇವೆ. ಅನಿವಾರ್ಯವಾಗಿ ಗುತ್ತಿಗೆ ಆಧಾರದ ಕೆಲಸ ಒಪ್ಪಿಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.ಇನ್ನೂ ಅಧಿಕಾರಕ್ಕೆ ಬಂದರೆ ನಮಗೆಲ್ಲಾ ಸರ್ಕಾರಿ ಉದ್ಯೋಗ ನೀಡೋದಾಗಿ ಕಾಂಗ್ರೆಸ್ ಗ್ಯಾರಂಟಿ ನೀಡಿತ್ತು. ಸರ್ಕಾರ ಭರವಸೆ ನೀಡಿರುವಂತೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಸಂತ್ರಸ್ತ ಕುಟುಂಬ ವರ್ಗದವರು ಆಗ್ರಹಿಸಿದ್ದಾರೆ.