ಬೆಂಗಳೂರು : ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಬದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಪೊಲೀಸರು ತೆರವುಗೊಳಿಸಿದ್ದರು. ಇದಕ್ಕೆ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಬೆನ್ನಲ್ಲೆ ಧಾರ್ಮಿಕ ಧ್ವಜ ಹಾರಾಟ ವಿಚಾರ ಬೆಂಗಳೂರಿಗು ಹಬ್ಬಿದೆ.
ಹೌದು ಇದೀಗ ಬೆಂಗಳೂರಿನ ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಸಿರು ಮತ್ತು ಹಳದಿ ಬಣ್ಣದ ಧ್ವಜ ಹಾರಿಸಿರುವ ವಿಚಾರವಾಗಿ ಆಕ್ಷೇಪ ವ್ಯಕ್ತವಾಗಿದೆ.ಈ ಬಗ್ಗೆ ಶಶಾಂಕ್ ಜೆಎಸ್ ಎಂಬುವರು ಟ್ವೀಟ್ ಮಾಡಿ ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರ ಪೊಲೀಸ್ ಠಾಣೆ ಎದುರಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಹಸಿರು ಧ್ವಜ ಹಾರಿಸಲಾಗಿದೆ.
ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಶಿವಾಜಿನಗರದ ಚಾಂದಿನಿ ಚೌಕ್ನ ಬೀದಿ ದೀಪದ ಮೇಲೆ ಹಾರಿಸಲಾಗಿದ್ದ ಹಸಿರು ಧ್ವಜ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿ ಸವಾಲು ಹಾಕಿದ್ದರು. ಮೊದಲಿಗೆ ವಿಕಾಸ್ ವಿಕ್ಕಿ ಎಂಬುವರು ಟ್ವೀಟ್ ಮಾಡಿ “ಈ ಬಾವುಟ ಯಾವ ಧರ್ಮದ್ದು ಎಂದು ‘ಕೈ’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ. ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೆ” ಎಂದು ಬರೆದುಕೊಂಡಿದ್ದರು.
ಇದರ ಬೆನ್ನಲ್ಲೇ ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಟ್ವೀಟ್ ಮಾಡಿ, ಪೂರ್ವ ವಿಭಾಗ ಡಿಸಿಪಿಯವರೇ ಶತ್ರು ದೇಶದ ಬಣ್ಣ ಹೋಲುವ ಧ್ವಜ ಹಾರಾಟ. ಸಾರ್ವಜನಿಕ ಪ್ರದೇಶದಲ್ಲಿ ಧ್ವಜ ನಿಯಮಕ್ಕೆ ವಿರುದ್ಧವಾದದ್ದು ಅಲ್ಲವೇ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಿ ಅಲ್ಲ ಎಂದು ಬರೆದುಕೊಂಡಿದ್ದರು.ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು, ಚಾಂದಿನಿ ಚೌಕ್ನ ಬೀದಿ ದೀಪದ ಮೇಲಿದ್ದ ಹಸಿರು ಧ್ವಜ ತೆರವು ಮಾಡಿ ತ್ರಿವರ್ಣ ಧ್ವಜ ಹಾರಿಸಿದ್ದರು.