ಬೆಂಗಳೂರು: ರಾಜ್ಯ ಸರ್ಕಾರದಿಂದ 10 ಎಕರೆವರೆಗಿನ ಜಮೀನು ಮಂಜೂರು ಹಾಗೂ 15 ರಿಂದ 500 ಕೋಟಿ ರೂ ಬಂಡವಾಳ ಬೂಡಿಕೆ ಪ್ರಸ್ತಾವನೆಗಳನ್ನು ಸಲ್ಲಿಸೋ ಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇನ್ಮುಂದೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ ಮುಂದೆ ಪ್ರಸ್ತಾವನೆಯನ್ನು ಮಂಡಿಸೋದಕ್ಕೆ ಸೂಚನೆ ನೀಡಿದೆ.
ಹೌದು ಈ ಹಿಂದೆ 10 ಎಕರೆ ವರೆಗಿನ ಜಮೀನು ಮಂಜೂರಾತಿಗೆ, 15 ರಿಂದ 500 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗುತ್ತಿತ್ತು. ಇದೀಗ ಈ ಕ್ರಮವನ್ನು ಬದಲಾವಣೆ ಮಾಡಿದ್ದು, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಮಂಡಿಸಲು ಸರ್ಕಾರ ಸೂಚನೆ ನೀಡಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸುತ್ತೋಲೆಯನ್ನು ಕೂಡ ಹೊರಡಿಸಲಾಗಿದ್ದು, ಎರಡು ಎಕರೆವರೆಗಿನ ವಿಸ್ತೀರ್ಣದ ಹಾಗೂ 15 ಕೋಟಿ ರೂ ವರೆಗಿನ ಬಂಡವಾಳ ಪ್ರಸ್ತಾವನೆಗಳನ್ನು ಆಯಾ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿ ಮುಂದೆ ಮಂಡಿಸಿ, ಅನುಮೋದನೆ ಪಡೆಯುವಂತೆ ತಿಳಿಸಲಾಗಿದೆ.
ಇನ್ನೂ 10 ಎಕರೆವರೆಗಿನ ವಿಸ್ತೀರ್ಣದ ಹಾಗೂ 15 ರಿಂದ 500 ಕೋಟಿ ರೂ ವರೆಗಿನ ಬಂಡವಾಳದ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸೋ ಬದಲಾಗಿ, ನೇರವಾಗಿ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಯ ಮುಂದೆ ಪರಿಶೀಲನೆಗಾಗಿ ಮಂಡಿಸುವಂತೆ ಸೂಚಿಸಲಾಗಿದೆ.
ರಾಜ್ಯ ಉನ್ನತಮಟ್ಟದ ಅನುಮೋದನಾ ಸಮಿತಿಯ ಮುಂದೆ ಮಂಡಿಸುವ ಎಲ್ಲ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಿ, ಅದರ ನಿರ್ಣಯದಂತೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಅನುಮೋದನೆಗೆ ಮಂಡಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.