ಬೆಂಗಳೂರು: ರಾಜ್ಯದ 25 ಬಿಜೆಪಿ ಲೋಕಸಭಾ ಸದಸ್ಯರು ಬಾಯಿಗೆ ಬೀಗ ಹಾಕಿ ಕೂತಿದ್ದಾರೆ. ಇವರೆಲ್ಲ ಯಾವ ಮುಖ ಹೊತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ಜನರ ಬಳಿ ಹೋಗುತ್ತಾರೆ? ಇಂತಹವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ. ರೈತರಿಗೆ ದ್ರೋಹ ಬಗೆದರೆ ಯಾವ ಶ್ರೀರಾಮಚಂದ್ರನೂ ಕಾಪಾಡಲಾರ ತಿಳಿದಿರಲಿ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡಿರುವಂತ ಅವರು, ರಾಜ್ಯದ ಬರಪೀಡಿತ ಪ್ರದೇಶದ ರೈತರಿಗೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಪರಿಹಾರದ ಹಣ ನೀಡದೆ ಕಳೆದ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗದ ರಾಜ್ಯದ ಪುಕ್ಕಲು ಬಿಜೆಪಿ ನಾಯಕರು ನಮ್ಮ ವಿರುದ್ಧ ‘‘ಪರಿಹಾರ ಕೊಡಿ ಕುರ್ಚಿ ಬಿಡಿ’’ ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ ಮಾತ್ರವಲ್ಲ ನಾಡಿನ ರೈತರಿಗೆ ಬಗೆಯುತ್ತಿರುವ ದ್ರೋಹವಾಗಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗ ಬೀಜ-ಗೊಬ್ಬರ ಕೇಳಿದ ರೈತರನ್ನು ಗುಂಡಿಟ್ಟು ಸಾಯಿಸಿದ ಪಕ್ಷ ಬಿಜೆಪಿ, ಪರಿಹಾರ ಕೊಡಿ ಎಂದು ಕೇಳಿದಾಗೆಲ್ಲ ನಾವೇನು ನೋಟ್ ಪ್ರಿಂಟಿಂಗ್ ಮೆಷಿನ್ ಇಟ್ಟು ಕೊಂಡಿದ್ದೆವೆಯೇ ಎಂದು ಧಾಷ್ಟ್ಯದಿಂದ ಕೇಳಿದ್ದು ಇದೇ ಬಿಜೆಪಿ ಮುಖ್ಯಮಂತ್ರಿಗಳು. ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಕೂಡಾ ಇದೇ ಬಿಜೆಪಿ. ಇಂತಹ ಹುಟ್ಟು ರೈತ ವಿರೋಧಿ ಬಿಜೆಪಿ ನಾಯಕರು ಈಗ ವೇಷ ಬದಲಿಸಿ ಸುರಿಸುವ ಕಣ್ಣೀರು ಮೊಸಳೆಯದ್ದು ಎಂದು ಅರ್ಥಮಾಡಿಕೊಳ್ಳದಷ್ಟು ರೈತರು ದಡ್ಡರಲ್ಲ ಎಂದು ಹೇಳಿದ್ದಾರೆ.
ಬರಗಾಲದ ಸೂಚನೆ ಸಿಗುತ್ತಿದ್ದಂತೆಯೇ ನಮ್ಮ ಸರ್ಕಾರ ಯುದ್ಧೋಪಾದಿಯಲ್ಲಿ ಸಮೀಕ್ಷೆ ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಸಮೀಕ್ಷೆಯ ನಂತರ ಕಳೆದ ವರ್ಷದ ಸೆಪ್ಟೆಂಬರ್ 13ರಂದು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ನಮ್ಮ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ರೂ.37 ಸಾವಿರ ಕೋಟಿಗಳಷ್ಟು ನಷ್ಟ ಉಂಟಾಗಿದೆ. ಇದರಲ್ಲಿ 18,177 ಕೋಟಿ ರೂಪಾಯಿ ಪರಿಹಾರವನ್ನು ನೀಡುವಂತೆ ಸೆ.23ಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಕ್ಟೋಬರ್‌ನಲ್ಲಿ ಬರ ಅಧ್ಯಯನಕ್ಕಾಗಿ ಕೇಂದ್ರದಿಂದ ತಜ್ಞರ ತಂಡ ಆಗಮಿಸಿತ್ತು. ಇಲ್ಲಿಯ ವರಗೆ ಅದು ನೀಡಿರುವ ವರದಿಯ ಗತಿ ಏನಾಗಿದೆಯೋ ಗೊತ್ತಿಲ್ಲ ಎಂದಿದ್ದಾರೆ.
ಕಂದಾಯ ಸಚಿವ ಕೃಷ್ಣಭೈರೇಗೌಡರ ಜೊತೆ ನಾನು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಕೃಷಿ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇಲ್ಲಿಯ ವರೆಗೆ ಬರ ಪರಿಹಾರ ಕೋರಿ 17 ಪತ್ರಗಳನ್ನು ಬರೆದಿದ್ದೇವೆ. ಯಾವುದಕ್ಕೂ ಉತ್ತರವೂ ಇಲ್ಲ, ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ನಾಯಕರು ಯಾವ ಮುಖ ಹೊತ್ತು ಬರಪೀಡಿತ ರೈತರ ಬಳಿ ನಮ್ಮ ವಿರುದ್ಧ ದೂರು ತೆಗೆದುಕೊಂಡು ಹೋಗುತ್ತಾರೆ. ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದಿಂದ ಈಗಾಗಲೇ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ. ಆದ್ದರಿಂದ ಅವರ ಬಳಿ ಹೋಗುವಾಗ ಜಾಗ್ರತೆಯಿಂದ ಇರಿ ಎಂದಷ್ಟೇ ಹೇಳಬಯಸುತ್ತೇನೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಪರಿಹಾರ ನೀಡದೆ ಇದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕೂತಿಲ್ಲ. ಬರಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 870 ಕೋಟಿ ರೂಪಾಯಿಗಳಿದೆ. ಬರಪೀಡಿತ 36 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತಿದ್ದೇವೆ. 21 ಜಿಲ್ಲೆಗಳಲ್ಲಿ ಟ್ಯಾಂಕರ್ ನಲ್ಲಿ ನೀರು ಪೂರೈಸಲು ಟೆಂಡರ್ ಕರೆದಿದ್ದೇವೆ. 158 ಕಡೆಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ತೋಡಲಾಗಿದೆ. ಖಾಸಗಿ ಜಮೀನು ಇರುವ 3,000 ಕಡೆಗಳಲ್ಲಿ ಕೊಳವೆ ಬಾವಿಗಳನ್ನು ತೋಡಲು ಸ್ಥಳಗಳನ್ನು ಗುರುತಿಸಲಾಗಿದೆ. ಸದ್ಯ ಎಲ್ಲಿಯೂ ಕುಡಿಯುವ ನೀರಿನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.
ಬಿತ್ತನೆ ಬೀಜದ ಆರುವರೆ ಲಕ್ಷ ಕಿಟ್ ಗಳನ್ನು ವಿತರಿಸಿದ್ದೇವೆ. 16 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಕರೆದಿದ್ದೇವೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ತಾಲೂಕು ಮಟ್ಟದ ಕಾರ್ಯಾಚರಣೆ ಪಡೆಯನ್ನು ರಚಿಸಲಾಗಿದೆ. ಈ ಪಡೆಗಳು ಇಲ್ಲಿಯ ವರೆಗೆ 350ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 210 ಸಭೆಗಳನ್ನು ನಡೆಸಿದೆ ಎಂದಿದ್ದಾರೆ.
ಜನವರಿ 25ರ ವರೆಗೆ ಬರಪೀಡಿತ ಪ್ರದೇಶದ 29 ಲಕ್ಷ ರೈತರಿಗೆ 545 ಕೋಟಿ ರೂ. ಪರಿಹಾರ ನೀಡಲಾಗಿದೆ. ರೈತರ ಬೆಳೆಹಾನಿ ಸಮೀಕ್ಷೆಯ ನಂತರ ಇನ್ನೂ 8-9 ಲಕ್ಷ ರೈತರಿಗೆ ಪರಿಹಾರ ನೀಡಲಾಗಿದೆ. ಬೆಳೆ ಹಾನಿ ಸಮೀಕ್ಷೆಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ದಾಖಲೀಕರಣದಲ್ಲಿ ಎದುರಾಗಿರುವ ತೊಡಕುಗಳನ್ನು ಸರಿಪಡಿಸಲಾಗಿದೆ. ಬರಪೀಡಿತ ಪ್ರದೇಶದಲ್ಲಿ ನಮ್ಮ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಜಿದ್ದಿಗೆ ಬಿದ್ದವರಂತೆ ಪೈಸೆ ಪರಿಹಾರವನ್ನು ನೀಡದೆ ಅನ್ಯಾಯ ಮಾಡುತ್ತಿದೆ. ಈ ವೈಫಲ್ಯವನ್ನು ಮುಚ್ಚಿಹಾಕಲು ರಾಜ್ಯದ ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧ ಹೋರಾಟದ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಬಿಜೆಪಿ ನಾಯಕರಿಗೆ ಕರ್ನಾಟಕದ ನೆಲದ ಮಣ್ಣು ಮತ್ತು ನೀರಿನ ಋಣ ಇದ್ದರೆ ದೆಹಲಿಗೆ ಹೋಗಿ ಕನ್ನಡಿಗರ ಬಗ್ಗೆ ಯಾಕಿಷ್ಟು ನಿಮಗೆ ದ್ವೇಷ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಬೇಕು. ಪರಿಹಾರಕ್ಕಾಗಿ ಒತ್ತಾಯಿಸಿ ಪ್ರಧಾನಿ ಕಾರ್ಯಾಲಯದ ಮುಂದೆ ಧರಣಿ ಕೂರಬೇಕು. ಇವರ ಆಟಾಟೋಪಗಳೇನಿದ್ದರೂ ರಾಜ್ಯದಲ್ಲಿ ಮಾತ್ರ, ಇಲ್ಲಿ ಎಲ್ಲರು ಹುಲಿ-ಸಿಂಹಗಳೇ, ಪ್ರಧಾನಮಂತ್ರಿ, ಗೃಹಸಚಿವರನ್ನು ಕಂಡಕೂಡಲೇ ಬಾಲ ಮುದುರಿದ ಇಲಿಗಳಾಗುತ್ತಾರೆ ಎಂದು ಗುಡುಗಿದ್ದಾರೆ.
BREAKING: 7 ದಿನಗಳಲ್ಲಿ ‘ದೇಶಾದ್ಯಂತ’ CAA ಜಾರಿ: ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ
BREAKING: ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ: ವಿಚಾರಣೆಗೆ ಪಾಟ್ನಾದ ED ಕಚೇರಿಗೆ ಹಾಜರಾದ ಲಾಲು ಯಾದವ್