ಮಂಗಳೂರು : ಮಂಡ್ಯದಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಡ್ಯ ಸೇರಿದಂತೆ ಬೆಂಗಳೂರಿನಲ್ಲೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಂದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದ್ದು ಬಿಜೆಪಿ ನಾಯಕರಿಂದ ಮಂಡ್ಯದ ಕೆರೆಗೋಡು ಗ್ರಾಮಕ್ಕೆ ಪಾದಯಾತ್ರೆ ಮಾಡೋ ಮೂಲಕ ಪ್ರತಿಭಟನೆಯ ಕಾವಿಗೆ ಕಿಚ್ಚು ಹತ್ತಿದಂತಾಗಿದೆ.
ಇದರ ಮಧ್ಯ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರತಿಕ್ರಿಯೆ ನೀಡಿದ್ದು, ರಾಮಭಕ್ತರು ಒಟ್ಟಾಗಿ ಸೇರಿ ಹನುಮ ಧ್ವಜ ಹಾರಿಸಿದ್ದಾರೆ. ಆದರೆ ಮುಸ್ಲಿಂರ ಓಟಿಗಾಗಿ ರಾಜ್ಯ ಸರ್ಕಾರ ಧ್ವಜ ತೆಗೆದಿದೆ. ಈ ಘಟನೆಯನ್ನು ವಿಹೆಚ್ಪಿ, ಬಜರಂಗದಳ ಖಂಡಿಸುತ್ತೆ. ಹನುಮ ಧ್ವಜ ಕೆಳಗಿಳಿಸಿದ ರೀತಿ ಮತ್ತೆ ಹನುಮ ಧ್ವಜ ಹಾರಿಸಬೇಕು. ಇಲ್ಲದಿದ್ದರೆ ಇಡೀ ರಾಮಭಕ್ತರಿಗೆ ಕರೆ ನೀಡುತ್ತೇವೆ. ರಾಜ್ಯದಲ್ಲಿ ಹನುಮ ಧ್ವಜ ಅಭಿಯಾನ ಮಾಡುತ್ತೇವೆ. ರಸ್ತೆ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ ಎಂದರು
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಈ ಮೂಲಕ ಹನುಮ ಭಕ್ತಿಯನ್ನು ಸರ್ಕಾರಕ್ಕೆ ತೋರಿಸುತ್ತೇವೆ. ಹಿಂದೂ ಸಮಾಜಕ್ಕೆ, ರಾಮ-ಹನುಮ ಭಕ್ತರ ಮನಸ್ಸಿಗೆ ನೋವಾಗಿದೆ. ರಾಷ್ಟ್ರ ಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾರಿಸಲು ಅದರದ್ದೇ ಆದ ನೀತಿ ನಿಯಮಗಳಿವೆ. ರಾಷ್ಟ್ರ ಧ್ವಜಕ್ಕೂ ಅವಮಾನ ಮಾಡಿದ್ದಾರೆ. ಈ ರೀತಿ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.