ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಮತ್ತು ಹಲವಾರು ಕಾಂಗ್ರೆಸ್ ಶಾಸಕರು ಅವರೊಂದಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಲಾಲು ಯಾದವ್ ನೇತೃತ್ವದ ಆರ್ಜೆಡಿಯನ್ನು ಒಳಗೊಂಡ ಮಹಾಘಟಬಂಧನ್ (ಮಹಾ ಮೈತ್ರಿಕೂಟ) ಸರ್ಕಾರದಿಂದ ನಿತೀಶ್ ಕುಮಾರ್ ಹೊರಬಂದು ಬಿಜೆಪಿ ನೇತೃತ್ವದ NDAಗೆ ಮತ್ತೆ ಸೇರುವ ಬಗ್ಗೆ ಊಹಾಪೋಹಗಳು ಹರಡಿವೆ.
ಜೆಡಿಯು-ಬಿಜೆಪಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಬಹುದು ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಿಹಾರದ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ಮುಖಂಡ ಸುಶೀಲ್ ಮೋದಿ, “ಮುಚ್ಚಿದ ಬಾಗಿಲುಗಳು ತೆರೆಯಬಹುದು” ಮತ್ತು ರಾಜಕೀಯವನ್ನು “ಸಾಧ್ಯತೆಗಳ ಆಟ” ಎಂದು ಕರೆದರು. ಆದಾಗ್ಯೂ, ಈ ವಿಷಯದ ಬಗ್ಗೆ ವಿವರವಾಗಿ ಮಾತನಾಡಲು ಅವರು ನಿರಾಕರಿಸಿದರು. ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಜನವರಿ 25 ರಂದು ನಿತೀಶ್ ಕುಮಾರ್ ಅವರ ‘ವಂಶಪಾರಂಪರ್ಯ ರಾಜಕೀಯ’ ಹೇಳಿಕೆಗಾಗಿ ಟೀಕಿಸಿದ ನಂತರ ಜೆಡಿಯು ಮತ್ತು ಆರ್ಜೆಡಿ ನಡುವಿನ ಸಂಬಂಧಗಳು ಹದಗೆಟ್ಟಿವೆ.