ಬೆಂಗಳೂರು : ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಡಲಾಗಿದೆ. ಈ ವಿಷಯದ ಕುರಿತಾಗಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಾತನಾಡಿ ಬಹುಶಹ ಮುಂದಿನ ವಾರ ಸೀಟು ಹಂಚಿಕೆ ಕುರಿತು ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿವೈ ವಿಜಯೇಂದ್ರ ಮನೆಗೆ ಬಂದಾಗ ಪ್ರಜ್ಚಲ್ ಅವರೇ ಸ್ವಾಗತ ಮಾಡಿದರು. ಹಿಂದೆ ನಾವು ಹಾಗು ಬಿಜೆಪಿ ಹೋರಾಟ ಮಾಡಿರಬಹುದು. ಆದರೆ ಈಗ ಒಂದಾಗಿ ಹೋಗುತ್ತೇವೆ. ಬಹುಶಃ ಮುಂದಿನ ವಾರದಲ್ಲಿ ಸೀಟು ಹಂಚಿಕೆ ತೀರ್ಮಾನ ಆಗಬಹುದು. ಕುಮಾರಸ್ವಾಮಿ ಅವರು ಬಿಜೆಪಿಯ ಕೆಲ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಸೀಟು ಹಂಚಿಕೆ ವಿಚಾರದಲ್ಲಿ ಕುಮಾರಸ್ವಾಮಿ ತೀರ್ಮಾನದ ಬಗ್ಗೆ ನಾನು ಮಧ್ಯಪ್ರವೇಶ ಮಾಡಲ್ಲ. ನಮಗೆ ಮಂಡ್ಯ ಕೋಲಾರ, ತುಮಕೂರು ಎಂದು ಊಹಾಪೋಹಗಳಿವೆ. ಹಾಸನದಲ್ಲಿ ಹಾಲಿ ಸಂಸದರು ನಮ್ಮವರೇ ಇದ್ದಾರೆ. ಅನೇಕರು ದೇವೇಗೌಡರು ಇಲ್ಲಿಂದ ನಿಂತು ಗೆಲ್ಲಬೇಕು ಎಂಬ ಭಾವನೆ ಮೂಡಿಸಿದ್ದರು. ಆದರೆ ನನಗೆ 91 ವರ್ಷ ವಯಸ್ಸಾಗಿದೆ. ಹಾಗಾಗಿ ನಾನು ಸ್ಪರ್ಧಿಸಲ್ಲ. ನಾನು ಪ್ರಜ್ವಲ್ ಪರ ಪ್ರಚಾರ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು.
ನಮ್ಮ ಹಾಗೂ ಬಿಜೆಪಿ ನಡುವೆ ಇನ್ನೂ ಸೀಟು ಹಂಚಿಕೆ ಅಂತಿಮ ಆಗಿಲ್ಲ. ಆದರೆ ಹಾಸನದಲ್ಲಿ ಹಾಲಿ ಸದಸ್ಯರು ನಮ್ಮವರೇ ಇದ್ದಾರೆ. ಕೆಲವರು ದೇವೇಗೌಡರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದಿದ್ದರಿಂದ ಗೊಂದಲ ಇತ್ತು. ಹಾಗಾಗಿ ನಾನೇ ಆ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಕಾರ್ಯಕರ್ತರ ಭೇಟಿಯಾಗಿದ್ದೇನೆ. ಈ ಲೋಕಸಭಾ ಕ್ಷೇತ್ರ ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.