ಬೆಂಗಳೂರು: ಇಂದು ರಾಷ್ಟ್ರೀಯ ಹೆಣ್ಣು ಮಗು ದಿನವಾಗಿದೆ. ಎಲ್ಲ ಹೆಣ್ಣು ಮಕ್ಕಳಿಗೂ ಶುಭಾಶಯಗಳು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ, ಅಬಲೆಯೂ ಅಲ್ಲ. ಅವಳೊಂದು ಮಹಾಶಕ್ತಿ” ಇದು ರಾಷ್ಟ್ರಕವಿ ಕುವೆಂಪು ಅವರು ಹೇಳಿರುವ ಸಾಲುಗಳು. ಮಹಿಳೆಯರ ಶಕ್ತಿಯನ್ನು ಜಾಗೃತಗೊಳಿಸ, ಪ್ರೇರಣೆ ನೀಡುವ ಕಾರ್ಯವನ್ನು ನಮ್ಮಸರ್ಕಾರ ಕೈಗೊಂಡಿದೆ ಎಂದರು.
ಒಂದು ಸಮಾಜ ಸದೃಢವಾಗಬೇಕಾದರೆ ಮೊದಲು ಹೆಣ್ಣು ಸ್ವಾವಲಂಬಿಯಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಎಲ್ಲದಕ್ಕೂ ಸ್ತ್ರೀ ಬಹಳ ಮುಖ್ಯ. ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳ ಅಭ್ಯುದಯಕ್ಕೆ ಸಾಕಷ್ಟು ಶ್ರಮಿಸುತ್ತಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಸಶಕ್ತೀಕರಣಕ್ಕೆ ಮುಂದಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು 2008 ರಿಂದ ಪ್ರತಿ ಜ.24 ರಂದು ರಾಷ್ಟ್ರೀಯ ಹೆಣ್ಣು ಮಗು ದಿನ ಆಚರಿಸುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆ, ಅವರ ಹಕ್ಕುಗಳ ಬಗ್ಗೆ ಈ ದಿನದಂದು ಜಾಗೃತಿ ಮೂಡಿಸಲಾಗುತ್ತದೆ ತಿಳಿಸಿದರು.
“ಉಜ್ವಲವಾದ ನಾಳೆಗಾಗಿ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದು” ಎಂಬುದು ಈ ವರ್ಷದ ರಾಷ್ಟ್ರೀಯ ಹೆಣ್ಣು ಮಗು ದಿನದ ಘೋಷ ವಾಕ್ಯವಾಗಿದೆ.
ಶಿಕ್ಷಣ, ಆರೋಗ್ಯ, ಪೌಷ್ಠಿಕತೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಉತ್ತೇಜನ ನೀಡುವ ಮೂಲಕ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಹಲವು ಕಾರ್ಯಕ್ರಮವಳನ್ನು ಈಗಾಗಲೇ ಕೈಗೊಂಡಿದೆ ಎಂಬುದು ಗಮನಾರ್ಹ ಎಂದರು.
ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ನೀಡುತ್ತಿದೆ. ಹೈಸ್ಕೂಲ್, ಕಾಲೇಜ್, ಅಂಗನವಾಡಿಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಾತ್ರವಲ್ಲ ನಮ್ಮ ಮೊದಲ ಗ್ಯಾರಂಟಿ ಯೋಜನೆಯಾದ ಶಕ್ತಿ ಅಡಿ ಇದುವರೆಗೆ ಹೆಣ್ಣು ಮಕ್ಕಳು 139.36 ಕೋಟಿ ಮಂದಿಯಷ್ಟು ಪ್ರಯಾಣ ಮಾಡಿದ್ದಾರೆ. ಇದುವರೆಗೆ 3327.27 ಕೋಟಿ ರೂ. ಮೌಲ್ಯದ ಶೂನ್ಯ ಟಿಕೆಟ್ ನೀಡಲಾಗಿದೆ. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ. ಸಣ್ಣ ಸಣ್ಣ ಉದ್ಯೋಗ, ಉದ್ದಿಮೆಗಳನ್ನು ಮಾಡುತ್ತಿರುವ ತಮ್ಮ ಕಾಲ ಮೇಲೆ ತಾವು ನಿಂತುಕೊಂಡಿರುವ ಹೆಣ್ಣು ಮಕ್ಕಳಿಗೆ ಈ ಯೋಜನೆ ಭಾರಿ ಶಕ್ತಿಯನ್ನೇ ನೀಡಿದೆ. ಇದಲ್ಲದೆ, ಮನೆಯಲ್ಲಿಯೇ ಕಾಲ ಕಳೆಯುವಂತಾಗಿದ್ದ ಅದೆಷ್ಟೋ ಗೃಹಣಿಯರು ಇಂದು ಖುಷಿ ಖುಷಿಯಲ್ಲಿ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕ್ಷೇತ್ರಗಳಿಗೆ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹೆಣ್ಣೊಬ್ಬಳು ಸ್ವತಂತ್ರವಾಗಿ ಸಂಚಾರ ಮಾಡುವಂತೆ ಮಾಡಿರುವುದು ಹೆಮ್ಮೆಯ ಸಂಗತಿಯಲ್ಲವೇ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಗೆ ಆರ್ಥಿಕ ಬಲ
ಈ ಹಿಂದೆ ಸ್ತ್ರೀ ಶಕ್ತಿ ಸಂಘಗಳ ಮೂಲಕ ಲಕ್ಷಾಂತರ ಮಹಿಳೆಯರು ತಮ್ಮ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದರು. ಆರ್ಥಿಕವಾಗಿ ಸದೃಢವಾಗಿದ್ದರು. ಈಗ ಅದೇ ಮಾದರಿಯಲ್ಲಿ ಆರ್ಥಿಕವಾಗಿ ಸಬಲಗೊಳ್ಳಲು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 1 ಕೋಟಿ 21 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾಸಿಕ ತಲಾ 2 ಸಾವಿರ ರೂ. ಜಮಾ ಮಾಡಲಾಗುತ್ತಿದೆ. ಅಂದರೆ ಮಾಸಿಕವಾಗಿ 2300 ಕೋಟಿ ರೂಪಾಯಿಯನ್ನು ನಮ್ಮ ಕಾಂಗ್ರೆಸ್ ಸರ್ಕಾರ ತೆಗೆದಿರಿಸಿದೆ. ಈ ಮೊತ್ತ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಿದೆ. ಇದರಿಂದ ಎಷ್ಟೋ ಮಂದಿಗೆ ಆರ್ಥಿಕವಾಗಿ ಸಹಾಯವಾಗಿದೆ ಎಂದು ಹೇಳಿದರು.
ಮಹಿಳೆಗೆ ಅನುಕಂಪ ಬೇಡ, ಪ್ರೋತ್ಸಾಹ ಬೇಕು
ಮಹಿಳೆ ಇಂದು ವಿಜ್ಞಾನ, ಬಾಹ್ಯಾಕಾಶ, ಎಂಜಿನಿಯರಿಂಗ್, ಸಂಶೋಧನೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಾ ಬಂದಿದ್ದಾಳೆ. ಹೆಣ್ಣು ಮಗಳಿಗೆ ಅನುಕಂಪ ಬೇಕಿಲ್ಲ. ಆಕೆಗೆ ಸಮರ್ಪಕವಾದ ಶಿಕ್ಷಣ ಕೊಡಬೇಕು, ಪ್ರೋತ್ಸಾಹ ಸಿಗಬೇಕು, ರಕ್ಷಣೆ ಕೊಡುವ ಕೆಲಸ ನಮ್ಮ-ನಿಮ್ಮೆಲ್ಲರದ್ದಾಗಿರಬೇಕು. ಆಕೆಯನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡುವ ನಮ್ಮ ಸಮಾಜವು ಏಳ್ಗೆ ವಿಷಯ ಬಂದಾಗ ಮರೆತುಬಿಡುತ್ತೇವೆ. ಇನ್ನು ಆ ರೀತಿಯಾಗಬಾರದು. ಸ್ತ್ರೀ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ ಮಹಾ ಪಾಪ. ಈ ಬಗ್ಗೆ ಸಂಘ ಸಂಸ್ಥೆಗಳು, ಪ್ರಜ್ಞಾವಂತರು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕು. ಜಾಲತಾಣಗಲ್ಲಿ ತಜ್ಞರು ಈ ಬಗ್ಗೆ ತಿಳಿವಳಿಕೆ ಹೇಳಬೇಕು. ಮಹಿಳೆಯರು, ಯುವತಿಯರು ಈ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಹಿಳಾಪರ ಪಕ್ಷ
ಕಾಂಗ್ರೆಸ್ ಯಾವತ್ತೂ ಸಹ ಸ್ತ್ರೀ ಪರವಾಗಿದೆ. ಆಕೆ ಆರ್ಥಿಕವಾಗಿ ಸದೃಢವಾಗಿರಬೇಕು ಎಂಬ ಆಶಯವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರ ಕಾಲದಿಂದ ಹಿಡಿದು ಪ್ರಸ್ತುತ ಕಾಲಘಟ್ಟದಲ್ಲಿಯೂ ಇದೇ ಮಾದರಿಯಲ್ಲಿ ನಮ್ಮ ಪಕ್ಷ ಕಾರ್ಯನಿರ್ವಹಿಸುತ್ತಿದೆ. ಹೆಣ್ಣು ಮಕ್ಕಳಿಗೆ ರಾಜಕೀಯವಾಗಿಯೂ ಸಾಕಷ್ಟು ಅವಕಾಶವನ್ನು ಕೊಟ್ಟಿದೆ. ಇಂಥ ಒಂದು ಪಕ್ಷದಲ್ಲಿ ನಾನು ಸೇವೆ ಸಲ್ಲಿಸುತ್ತಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣ- ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ
BREAKING: ಗದಗದಲ್ಲಿ ‘ಸರ್ಕಾರಿ ಬಸ್ ಹಾಗೂ ಲಾರಿ’ ನಡುವೆ ಭೀಕರ ಅಪಘಾತ: ಮೂವರು ಸಾವಿನ ಶಂಕೆ