ಕೆಎನ್ಎನ್ಸಿನಿಮಾಡೆಸ್ಕ್: ಕನ್ನಡ ಚಿತ್ರರಂಗದಲ್ಲಿ ನಾನಾ ಥರದ ಪ್ರಯತ್ನ, ಪ್ರಯೋಗಗಳು ನಡೆಯುತ್ತಿವೆ. ಈಸಾಲಿಗೆ ಮತ್ತೊಂದು ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ದವಾಗಿದೆ. ಹೌದು, ಪೋಸ್ಟ್ ಪ್ರೊಡಕ್ಷನ್ ಮುಕ್ತಾಯ ಘಟ್ಟದಲ್ಲಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಆಗಮನವೂ ಆಗಿದೆ. ಅಂದಹಾಗೆ, ಹೀಗೊಂದು ಪೀಠಿಕೆಗೆ ಕಾರಣವಾಗಿರೋದು ಗೌರಿ ಶ್ರೀನಿವಾಸ್ ನಿರ್ದೇಶನದಲ್ಲಿ ರೂಪುಗೊಂಡಿರುವ `ಜರ್ನಿ ಆಫ್ ಬೆಳ್ಳಿ’ ಚಿತ್ರ.
ಜೀ ಕನ್ನಡ ವಾಹಿನಿಯ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಗೌರಿ ಶ್ರೀನಿವಾಸ್, ಆ ನಂತರ ಹಲವಾರು ದಿಕ್ಕುಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮದೇ ಲಿಚಿ ಫಿಲಂಸ್ ಕಂಪೆನಿ ಕಟ್ಟಿದವರು. ಅದಾದ ಬಳಿಕ ಒಂದಷ್ಟು ಸಾಕ್ಷ್ಯಚಿತ್ರಗಳು, ಕಾಪೋರೇಟ್ ಜಾಹೀರಾತುಗಳನ್ನು ಸೃಷ್ಟಿಸುವ ಮೂಲಕ ಅನುಭವ ಜಗತ್ತನ್ನು ವಿಸ್ತರಿಸಿಕೊಂಡವರು. ಇವರೇ ನಿರ್ಮಾಣ ಮಾಡಿದ್ದ ಮದ್ಯಪ್ರದೇಶದ ಹ್ಯಾಂಡ್ಲೂಮ್ ಉದ್ಯಮದ ಕುರಿತಾದ `the woven motifs of chanderi’ ಎಂಬ ಸಾಕ್ಷ್ಯಚಿತ್ರಕ್ಕೆ ಇತ್ತೀಚೆಗಷ್ಟೇ ಪ್ರಶಸ್ತಿ ಲಭಿಸಿದೆ. ಇಷ್ಟೆಲ್ಲ ಅನುಭವ ಪಡೆದುಕೊಂಡ ನಂತರ ಅವರು ಚೆಂದದ್ದೊಂದು ಕಥೆ ಸಿದ್ಧಪಡಿಸಿಕೊಂಡು `ಜರ್ನಿ ಆಫ್ ಬೆಳ್ಳಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳನ್ನು ಮುಗಿಸುತ್ತಿದ್ದಾರೆ. ಹೊಸತನದ ಕಥೆಯೊಂದಿಗೆ ಗೌರಿ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತುಳು ಭಾಷೆಯಲ್ಲಿ `ಕಾರ್ನಿಕೊದ ಕಲ್ಲುರ್ಟಿ’ ಅಂತೊಂದು ಸಿನಿಮಾ ನಿರ್ಮಾಣ ಮಾಡಿದ್ದ ಮಹೇಂದ್ರ ಕುಮಾರ್ `ಜರ್ನಿ ಆಫ್ ಬೆಳ್ಳಿ’ಯ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ.