ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದು ‘’ದಲಿತ ಸಮುದಾಯದ ದಾರಿ ತಪ್ಪಿಸುವ ಕುತಂತ್ರವಷ್ಟೇ ಆಗಿದ್ದು ಇದರ ಹಿಂದೆ ಯಾವುದೇ ಪ್ರಾಮಾಣಿಕವಾದ ಕಾಳಜಿ ಇಲ್ಲ ಅಂತ ಸಿಎಂ ಸಿದ್ರಾಮಯ್ಯ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಮಾಡಿರುವ ಅವರು ಇದೇ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ ಕೂಡಾ ಅಂತಿಮವಾಗಿ ಪರಿಶಿಷ್ಟಜಾತಿಗಳ ಉಪವರ್ಘೀಕರಣ ಮಾಡಿ ಒಳಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿಯೊಂದೇ ಪರಿಹಾರ ಎಂದು ವರದಿ ನೀಡಿತ್ತು. ಆಂಧ್ರ ಪ್ರದೇಶದ ಪರಿಶಿಷ್ಟ ಜಾತಿಗಳ ಉಪವರ್ಗೀಕರಣದ ಬಗ್ಗೆ ಅಧ್ಯಯನ ನಡೆಸಿದ್ದ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಹೀಗಿರುವಾಗ ಇದಕ್ಕೆ ಇನ್ನೊಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಅಗತ್ಯವಾದರೂ ಏನಿದೆ? ಇದು ಕೇವಲ ‘’ ಸಮಯ ಕೊಲ್ಲುವ’’ ತಂತ್ರ ಅಷ್ಟೇ ಆಗಿದೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕೆಂಬ ಪ್ರಾಮಾಣಿಕ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದ್ದರೆ ಸಂವಿಧಾನ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡುವ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿ ಅಂಗೀಕಾರ ಪಡೆಯಬೇಕು ಮತ್ತು ಶೀಘ್ರವಾಗಿ ಒಳಮೀಸಲಾತಿಯನ್ನು ಜಾರಿಗೆ ತರಬೇಕು.
ಎಷ್ಟೇ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದರೂ ಅವುಗಳು ಸಂವಿಧಾನವನ್ನು ಮೀರಿ ಯಾವ ಶಿಫಾರಸನ್ನೂ ಮಾಡಲು ಸಾಧ್ಯ ಇಲ್ಲ. ಸಂವಿಧಾನದ ಪರಿಚ್ಚೇದ 341(1) ಮತ್ತು (2) ರ ಪ್ರಕಾರ ಪರಿಶಿಷ್ಟ ಜಾತಿಯ ಪಟ್ಟಿಗೆ ಹೊಸ ಜಾತಿಗಳನ್ನು ಸೇರಿಸುವುದಾಗಲಿ ಇಲ್ಲವೇ ಯಾವುದಾದರೂ ಜಾತಿಯನ್ನು ಹೊರಗೆ ತೆಗೆಯಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವಾಗಿದೆ ಎನ್ನುವುದು ಸಂವಿಧಾನದ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದವರಿಗೆ ತಿಳಿದಿರುವ ಸರಳ ಸತ್ಯ. ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲದ ಬಿಜೆಪಿ ಸಂವಿಧಾನವನ್ನೇ ಉಲ್ಲಂಘಿಸಲು ಹೊರಟ ಹಾಗೆ ಕಾಣುತ್ತಿದೆ.
‘’ ಒಳಮೀಸಲಾತಿ ನೀಡಲು ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಬೇಕೆಂದು ಆಂಧ್ರಪ್ರದೇಶದ ಪರಿಶಿಷ್ಟ ಜಾತಿಯ ಒಳಮೀಸಲಾತಿ ಬೇಡಿಕೆಯ ಪರಿಶೀಲನೆಗೆ ನೇಮಿಸಲಾದ ರಾಷ್ಟ್ರೀಯ ಆಯೋಗ ಶಿಫಾರಸು ಮಾಡಿದೆ’’ ಎಂದು 2023ರ ಜುಲೈ 23ರಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣ ಸ್ವಾಮಿಯವರು ರಾಜ್ಯಸಭೆಗೆ ತಿಳಿಸಿದ್ದರು. ಇದು ಬಿಜೆಪಿ ಸದಸ್ಯ ಜಿ.ವಿ.ಎಲ್ .ನರಸಿಂಹಮೂರ್ತಿ ಅವರ ಪ್ರಶ್ನೆಗೆ ನೀಡಿದ್ದ ಉತ್ತರವಾಗಿತ್ತು. ಈಗ ಇದೇ ಸಚಿವ ಎ.ನಾರಾಯಣ ಸ್ವಾಮಿಯವರು ಒಳಮೀಸಲಾತಿಗೆ ಸಂವಿಧಾನದ ತಿದ್ದುಪಡಿಯ ಅಗತ್ಯ ಇಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸ.
ರಾಜ್ಯದ ಬಿಜೆಪಿ ನಾಯಕರು ಎಂದಿನಂತೆ ಎರಡೆರಡು ನಾಲಿಗೆಗಳಲ್ಲಿ ಮಾತನಾಡುತ್ತಿದ್ದಾರೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬೇಡಿಕೆಯ ಈಡೇರಿಕೆಯ ಹೊಣೆ ತಮ್ಮ ಹೆಗಲ ಮೇಲೆ ಬಿದ್ದ ನಂತರ ತಳಮಳಕ್ಕೀಡಾಗಿರುವ ಬಿಜೆಪಿ ನಾಯಕರು ತಲೆಗೊಬ್ಬರಂತೆ ತಲೆಬುಡವಿಲ್ಲದ ಹೇಳಿಕೆಗಳನ್ನು ನೀಡಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಿದ್ದಾರೆ.
ಪರಿಶಿಷ್ಟರ ಒಳಮೀಸಲಾತಿ ನೀಡಲು ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ಅಗತ್ಯ ಇಲ್ಲ ಎಂದು ಮಾಜಿ ಸಚಿವ ಗೋವಿಂದಪ್ಪ ಕಾರಜೋಳ ಹೇಳುತ್ತಿದ್ದಾರೆ. ಸದಾಶಿವ ಆಯೋಗದ ವರದಿಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರಬೇಕಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳುತ್ತಿದ್ದಾರೆ. ಈ ರೀತಿಯ ನಿರಾಧಾರ ಮಾತುಗಳಿಂದ ತಮ್ಮ ಅಜ್ಞಾನವನ್ನು ತಾವೇ ಪ್ರದರ್ಶಿಸುತ್ತಿದ್ದೇವೆ ಎಂಬ ಅರಿವು ಇವರಿಗೆ ಇದ್ದ ಹಾಗಿಲ್ಲ.
ಮಾಜಿ ಸಚಿವ ಗೋವಿಂದ ಕಾರಜೋಳರಂತಹ ಹಿರಿಯ ದಲಿತ ನಾಯಕರು ಮತ್ತು ತಮ್ಮನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿ ಎಂದು ಕರೆದುಕೊಳ‍್ಳುವವರು ಕೂಡಾ ಸಂವಿಧಾನವನ್ನು ತಿರುಚಲು ಹೊರಟಿರುವುದು ವಿಷಾದನೀಯ. ಇಂತಹ ತಪ್ಪು ಮಾಹಿತಿಗಳನ್ನು ಮಾಜಿ ಸಚಿವ ಕಾರಜೋಳ ಹಂಚಿಕೊಳ‍್ಳುತ್ತಿರುವುದು ಖಂಡಿತ ಅವರ ಅಜ್ಞಾನದಿಂದ ಅಲ್ಲ. ದಲಿತ ವಿರೋಧಿಯಾಗಿರುವ ಆರ್ ಎಸ್ ಎಸ್ ಹೇಳಿಕೊಟ್ಟಿರುವ ಗಿಣಿಪಾಠವನ್ನು ಅವರು ಒಪ್ಪಿಸುತ್ತಿದ್ದಾರೆ ಅಷ್ಟೆ.
ಎ..ಜೆ.ಸದಾಶಿವ ಆಯೋಗದ ವರದಿಯನ್ನು ನಮ್ಮ ಸರ್ಕಾರ ಜಾರಿಗೆ ತರಬೇಕಾಗಿತ್ತು ಎಂದು ಮಾಜಿ ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇವರು ಮೂರು ವರೆ ವರ್ಷಗಳ ಕಾಲ ತಾವು ರಾಜ್ಯದ ಮುಖ್ಯಮಂತ್ರಿಯಾಗಿರುವುದನ್ನು ಮರೆತೇ ಬಿಟ್ಟಿದ್ದಾರೆ. ಆದರೆ ರಾಜ್ಯದ ಜನತೆ ನೆನಪಲ್ಲಿ ಇಟ್ಟುಕೊಂಡಿದ್ದಾರೆ. ಈಗ ನಮ್ಮನ್ನು ಒತ್ತಾಯಿಸುವವರು ತಾವು ಅಧಿಕಾರದಲ್ಲಿದ್ದಾಗ ಯಾಕೆ ಸದಾಶಿವ ಆಯೋಗದ ವರದಿಯನ್ನು ಒಪ್ಪಿ ಜಾರಿಗೆ ತರಲಿಲ್ಲ? ಇಷ್ಷು ಮಾತ್ರವಲ್ಲ ಇದೇ ವಿಷಯದ ಅಧ್ಯಯನಕ್ಕೆ ಇನ್ನೊಂದು ಸಮಿತಿ ಮಾಡಿ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿರುವುದು ಕೂಡಾ ತಮ್ಮದೇ ನೇತೃತ್ವದ ಸರ್ಕಾರ ಎನ್ನುವುದನ್ನು ಬೊಮ್ಮಾಯಿಯವರೇ ಮರೆತಂತಿದೆ.
ರಾಜ್ಯದ ಬಿಜೆಪಿ ನಾಯಕರು ನಮ್ಮ ವಿರುದ್ದ ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಾ ವೃಥಾ ಕಾಲಹರಣ ಮಾಡದೆ ಸಂವಿಧಾನದ 341ನೇ ಪರಿಚ್ಚೇದಕ್ಕೆ ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಬೇಕು.