ಆಯಾ ಪಕ್ಷ ಹೊರಡಿಸಿದ್ದ ವಿಪ್ ಉಲ್ಲಂಘಿಸಿ ಅನರ್ಹಗೊಂಡಿದ್ದರೆ, ಅಂತಹವರು ನಂತರದ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭೆಯಲ್ಲಿ ವಿಪ್ ಉಲ್ಲಂಘಿಸಿದ ಆರೋಪದ ಮೇಲೆ ನಗರಸಭೆ ಸದಸ್ಯ ಮೊಹಮ್ಮದ್ ಶಫಿಕ್ ಅವರನ್ನು ಅನರ್ಹಗೊಳಿಸಲಾಗಿತ್ತು. ಅವರು ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಮುನೇಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, “ವಿಪ್ ಉಲ್ಲಂಘಿಸಿ ಅನರ್ಹರಾದವರು, ನಂತರ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಯಾವುದೇ ನಿರ್ಬಂಧ ಇರುವುದಿಲ್ಲ” ಎಂದು ಹೇಳಿದೆ. ಸಂವಿಧಾನದ ಕಲಂಗಳನ್ನು ಉಲ್ಲೇಖಿಸಿರುವ ನ್ಯಾಯಾಧೀಶರು, “ಸಂವಿಧಾನದ ಪರಿಚ್ಛೇದ 191(1)ರ ಪ್ರಕಾರ ಅನರ್ಹಗೊಂಡರೆ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ಆದರೆ, 191(2)ರ 10ನೇ ಅನುಸೂಚಿ ಅಡಿಯಲ್ಲಿ ಅನರ್ಹಗೊಂಡಿದ್ದರೆ, ಆ ಅನರ್ಹತೆ ಸದಸ್ಯತ್ವಕ್ಕೆ ಮಾತ್ರ ಅನ್ವಯವಾಗಲಿದೆ. ಅಂತಹ ವ್ಯಕ್ತಿ ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಬಹುದು. ಈ ಬಗ್ಗೆ, ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ” ಎಂದು ವಿವರಿಸಿದ್ದಾರೆ. ಶಫಿಕ್ ಅವರ ಸ್ಪರ್ಧೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆಯಾಗಿದೆ.