ಬೆಂಗಳೂರು : ಇತ್ತೀಚಿಗೆ ಮೈಸೂರು ಮಂಡ್ಯದಲ್ಲಿ 900ಕ್ಕೂ ಹೆಚ್ಚು ಬ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಬೆಚ್ಚಿ ಬೆಳಿಸುವಂತಹ ಘಟನೆ ರಾಜ್ಯದಲ್ಲಿ ನಡೆದಿತ್ತು.ಭ್ರೂಣ ಹತ್ಯೆ ಇದೀಗ ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಭ್ರೂಣ ಹತ್ಯೆ ತಡೆಗೆ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ಜತೆ ಸಭೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಭ್ರೂಣ ಹತ್ಯೆ ತಡೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ರಾಜ್ಯಮಟ್ಟದಲ್ಲಿ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಜಿಲ್ಲಾಧಿ ಕಾರಿಗಳ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ, ಎಂದರು.
ಈ ಕಾರ್ಯಪಡೆಗಳು ಭ್ರೂಣ ಹತ್ಯೆ ಪ್ರಕರಣಗಳ ವಿಚಾರದಲ್ಲಿ ಕಾಯಿದೆಯಡಿ ಕಾರ್ಯನಿರ್ವಹಿಸಿ ಹೆಚ್ಚು ನಿಗಾ ವಹಿಸಲಿವೆ. ಅಲ್ಲದೆ, ಆರೋಗ್ಯ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಪ್ರತ್ಯೇಕವಾಗಿ ಎಸಿಪಿ ಮಟ್ಟದ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಸಬ್ ಇನ್ಸ್ಪೆಕ್ಟರ್ ನಿಯೋಜಿಸುವಂತೆ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು. ಇದರಿಂದ ಭ್ರೂಣ ಹತ್ಯೆ ಪ್ರಕರಣ ಗಳನ್ನು ಬಯಲಿಗೆಳೆಯಲು ಸಹಕಾರಿಯಾಗಲಿದೆ, ಎಂದರು.
ಭ್ರೂಣ ಹತ್ಯೆ ನಡೆಸುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಈಗಿರುವ ಕಾಯಿದೆಯಲ್ಲಿ 10 ಸಾವಿರ ರೂ. ದಂಡ, 3 ವರ್ಷ ಜೈಲು ಶಿಕ್ಷೆ ಇದೆ. 5 ಲಕ್ಷ ರೂ.ವರೆಗೆ ದಂಡ ವಿಧಿಸಿ, 5 ವರ್ಷ ಜೈಲು ಶಿಕ್ಷೆವಿಧಿಸುವ ನಿಟ್ಟಿನಲ್ಲಿ ಕಾಯಿದೆಗೆ ತಿದ್ದು ಪಡಿ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಅಲ್ಲದೆ, ತಪ್ಪಿತಸ್ಥರಿಗೆ ಜಾಮೀನು ಸಿಗದಂತೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.