ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು ಹೀಗಿದೆ.
ಪ್ರಮುಖ ನಿರ್ಣಯಗಳು
●ಗೃಹ ಜ್ಯೋತಿ ಯೋಜನೆಯ ಅನುಷ್ಠಾನ ಕುರಿತು ದಿನಾಂಕ 5.6.2023 ರಂದು ಹೊರಡಿಸಿರುವ ಸರ್ಕಾರಿ ಆದೇಶವನ್ನು ಮಾರ್ಪಡಿಸಿ ಮಾಸಿಕ 48 ಯೂನಿಟ್ ಗಳಿಗಿಂತ ಕಡಿಮೆ ಬಳಸುವ LT 2 ಗ್ರಾಹಕರಿಗೆ ಹೆಚ್ವರಿ 10 % ಬದಲಿಗೆ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್ ಗಳನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ.
●ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
●ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಷೇರು ಬಂಡವಾಳವನ್ನು ರೂ.600 ಕೋಟಿ ರೂ.ಗಳಿಂದ 1200 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಚಿವ ಸಂಪುಟ ಅನುಮೋದಿಸಿದೆ.
●ಉಡುಪಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಭವನ ಮತ್ತು ಎ.ಡಿ.ಆರ್ ಸಂಕೀರ್ಣ ವನ್ನೊಳಗೊಂಡ ಅನೆಕ್ಸ್ ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ( ಪ್ರಥಮ ಹಂತ) ರೂ.15.14 ಕೋಟಿಗಳ ಅಂದಾಜುಪಟ್ಟಿಗೆ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ ಸಚಿವ ಸಂಪುಟದ ಒಪ್ಪಿಗೆ
●ವಿಜಯನಗರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ನಂದಿಹಾಳ ಪಿ.ಹೆಚ್ ಗ್ರಾಮದ ಹೆಸರನ್ನು ಆರೂಢ ನಂದಿಹಾಳ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ
*ಚಿಕ್ಕಮಗಳೂರು ಜಿಲ್ಲೆಯ ಐ.ಡಿ.ಪೀಠದ ಶ್ರೀ ಗುರುದತ್ತಾತ್ರೆಯ ಬಾಬಾ ಬುಡನ್ ಸ್ವಾಮಿ ದರ್ಗಾ ಅಧಿಸೂಚಿತ ಸಂಸ್ಥೆಗೆ ಶ್ರೀ ಸೈಯದ್ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಇವರು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಎಸ್ ಎಲ್ ಪಿ ಪ್ರಕರಣದಲ್ಲಿ ಸರ್ಕಾರದ ನಿಲುವನ್ನು ವ್ಯಕ್ತಪಡಿಸಲು, ಪ್ರಕರಣದ ಸಮಗ್ರ ಪರಿಶೀಲನೆ ನಡೆಸಿ ಶಿಫಾರಸ್ಸು ನೀಡಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಗೃಹ ಸಚಿವರು, ಸದಸ್ಯರಾಗಿ ಕಾನೂನು ಸಚಿವರು, ಸಾರಿಗೆ ಸಚಿವರು , ಕಂದಾಯ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ನಿರ್ಣಯ ಕೈಗೊಳ್ಳಲಾಗಿದೆ.
· ಶಿವಮೊಗ್ಗ ನಗರದ ಹಳೆಜೈಲು ಆವರಣದ ಸ.ನಂ.75ರಲ್ಲಿನ ಒಟ್ಟು 46.32 ಎಕರೆ –ಗುಂಟೆ ಸಾರ್ವನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಪ್ರದೇಶವನ್ನು ‘ಅಲ್ಲಮ ಪ್ರಭು ಉದ್ಯಾನವನ’ ಎಂದು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
· ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕನ್ನು ‘ಚನ್ನಮ್ಮನ ಕಿತ್ತೂರು ತಾಲ್ಲೂಕು’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿದೆ.
· ಜಲಜೀವನ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಅಂತರಸಂತೆ, ಹಂಪಾಪುರ ಮತ್ತು ವಿವಿಧ ಜನವಸತಿ ಪ್ರದೇಶಗಳಿಗೆ ಹಾಗೂ ಟಿ.ನರಸೀಪುರ ತಾಲ್ಲೂಕಿನ ದೊಡ್ಡಬಾಗಿಲು, ಹಾವೇರಿ ತಾಲ್ಲೂಕಿನ ನೆಗಳೂರು, ಹಾನಗಲ್ ತಾಲ್ಲೂಕಿನ ಕುಡ್ಲ ಮತ್ತಿತರ ಜನವಸತಿ ಹಾಗೂ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
· ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಗೆ ಸಂಬಂಧಿಸಿದಂತೆ ಭೋವಿ, ಬಂಜಾರ, ಕೊರಮ ಮತ್ತು ಕೊರಚ ಜಾತಿಗಳು ಹಾಗೂ ಅದರ ಪರ್ಯಾಯ ಜಾತಿಗಳು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು, ಅದನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಹಾಗೂ ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಅವುಗಳನ್ನು ಮುಂದುವರೆಸುವಂತೆ ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ.