ಕರ್ನಾಟಕದಲ್ಲಿ ಬರ ಎದುರಾಗಿದೆ. ಇನ್ನೂ ಪರಿಹಾರ ನೀಡಿಲ್ಲವೆಂದು ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ, ಬರದ ನಡುವೆಯೂ ಒಣಮೆಣಸಿನಕಾಯಿ ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಈ ಹಿಂದೆ 50,000 ರೂ.ವರೆಗೆ ಮಾರಾಟವಾಗುತ್ತಿದ್ದ ಕ್ವಿಂಟಲ್ ಮೆಣಸಿನಕಾಯಿ ಬೆಲೆ ಈಗ, 10,000 ರೂ.ಗೆ ಕುಸಿದಿದೆ ಎಂದು ಹೇಳಲಾಗಿದೆ. ಪರಿಣಾಮ, ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಭಾರೀ ಹೊಡೆತ ಕೊಟ್ಟಿದೆ ಎಂದು ಮಾಹಿತಿ ದೊರಕಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಈಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮೆಣಸಿನಕಾಯಿ ಖರೀದಿಗೆ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಯಲ್ಲಿ ಸುಮಾರು 37,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಪ್ರತಿ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲು ಸರಾಸರಿ 70,000 ರೂ. ವೆಚ್ಚವಾಗುತ್ತದೆ. ಬೆಳೆದ ಬೆಳೆಗೆ ಬೆಲೆಯೇ ಸಿಗದಿದ್ದರೆ ನಮ್ಮ ಪರಿಸ್ಥಿತಿ ಏನಾಗಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆಯಾಗಿದೆ.