ಬೆಂಗಳೂರು : ಕೋವಿಡ್ ಸಂದರ್ಭದಲ್ಲಿ ಕ್ವಾರಂಟೈನ್ ಆದಾಗ ಬಿಬಿಎಂಪಿ ಅಧಿಕಾರಿ ಒಬ್ಬರು ನನ್ನನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾರೆಂದು ಆರೋಪಿಸಿದ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಇದೀಗ ಸಂಕಷ್ಟ ಎದುರಾಗಿದ್ದು ಬಿಬಿಎಂಪಿ ಅಧಿಕಾರಿ ಡ್ರೋನ್ ಪ್ರತಾಪ್ ವಿರುದ್ಧ ಮಾನನಷ್ಟ ಮೊಕದಮ್ಮೆ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ .
ಮಾಹಿತಿ ಪ್ರಕಾರ, ಬಿಬಿಎಂಪಿ ಅಧಿಕಾರಿ ಪ್ರಯಾಗ್ ರಾಜ್ ವಿರುದ್ಧ ಡ್ರೋನ್ ಪ್ರತಾಪ್ ಹಲ್ಲೆ ನಡೆಸಿದ್ದಾರೆಂದು ಈ ಹಿಂದೆ ಹೇಳಿಕೆ ಕೊಟ್ಟಿದ್ದರು. ಆದ್ದರಿಂದ ಪ್ರಯಾಗ್ ಅವರು 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ.
ಈ ವಿಚಾರಕ್ಕೆ ವಾದ ಪ್ರತಿವಾದ ನಡೆದಿದ್ದು, ಇಂದು ಕೋರ್ಟ್ನಿಂದ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ವಕೀಲರು ತಿಳಿಸಿದ್ದಾರೆ.ಇತ್ತೀಚೆಗೆ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಯಲ್ಲಿ ಕೋವಿಡ್ ಸಂದರ್ಭದಲ್ಲಿ ತಾನು ಅನುಭವಿಸಿದ್ದ ಕ್ವಾರಂಟೈನ್ ಕಹಾನಿ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ಬಿಬಿಎಂಪಿ ನೋಡಲ್ ಅಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ ಹುರುಳಿಲ್ಲ.
ಆತನಿಗೆ ನಾನು ಯಾವುದೇ ಮಾನಸಿಕ ಹಿಂಸೆ ಕೊಟ್ಟಿಲ್ಲ. ಆತನ ತಲೆಯ ಮೇಲೆ ಹೊಡೆದಿಲ್ಲ. ಪ್ರತಾಪ್ ಮಹಾನ್ ಸುಳ್ಳುಗಾರ, ಈತ ಹೇಳುವ ಮಾತಿಗೆ ಒಂದೇ ಒಂದು ಸಾಕ್ಷ್ಯ ಒದಗಿಸಲಿ. ಆತನ ಆರೋಪ ನಿಜವಾಗಿದ್ದರೆ ನಾನು ರಾಜೀನಾಮೆ ಕೊಟ್ಟು ಹೊರಟು ಹೋಗುತ್ತೇನೆ ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಮರುದಿನವೇ ಎಚ್ಚರಿಸಿದ್ದರು.