ಹಾಸನ : ಒಂದೆಡೆ ಕಾಂಗ್ರೆಸ್ ನ ಹಲವು ಸಚಿವರು ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿ ಎಂದು ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಇದೀಗ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಪೂರ್ಣಾವಧಿ ಆಡಳಿತದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ತಿಳಿಸಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚು ಲೋಕಸಭಾ ಸ್ಥಾನ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗುತ್ತಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಅಡೆತಡೆ ಇಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ.
ಚುನಾವಣೆಗೂ ಮೊದಲು 5 ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬಾ ಮೊದಲೇ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ.ಬಡವರು ಶೋಷಿತರ ಕೆಲಸ ಮಾಡುವ ಹಂಬಲ ಕಾಂಗ್ರೆಸ್ ಪಕ್ಷಕ್ಕೆ ಇದೆ. ಹಾಗಾಗಿ ನೀವೆಲ್ಲರೂ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಬೇಕು.ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಬೇಕಿದೆ ಎಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯಪುತ್ರ ಹೇಳಿಕೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ನೈತಿಕವಾಗಿ ಸಿಎಂ ಗೆ ಮತ್ತಷ್ಟು ಬೆಂಬಲ ಸಿಗುತ್ತದೆ. ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 56,000 ಕೋಟಿ ರೂಪಾಯಿ ಖರ್ಚು ಆಗುತ್ತದೆ. ರಾಜ್ಯದಲ್ಲಿ ಯಾವ ಸರ್ಕಾರವು ಎಷ್ಟು ಹಣವನ್ನು ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವ ಜನರ ಬೆಂಬಲ ಬೇಕಾಗುತ್ತದೆ. ಆಗ ಸಿದ್ದರಾಮಯ್ಯ 5 ವರ್ಷ ಗ್ಯಾರಂಟಿ ಯೋಜನೆಯ ಮುಂದುವರಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಕನಕ ಜಯಂತಿ ಆಚರಣೆ ಶುರು ಮಾಡಿದ್ದರು. ನೀವು ಬೆಂಬಲಿಸಿದ್ದರಿಂದಲೇ ಎರಡನೇ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಎಂದು ಯತಿಂದ್ರ ಹೇಳಿದರು.