ಶಿವಮೊಗ್ಗ : ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣ, ಅದ್ಭುತ ಚಿಂತಕ – ಮಹಾ ಯೋಗಿ ಸಿದ್ದರಾಮೇಶ್ವರರು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘ ಇವರ ಸಂಯುಕ್ತಾ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರರ 852ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿದ್ದ ಕರ್ಮಯೋಗಿ ಎಂದೇ ಖ್ಯಾತನಾಮರಾಗಿದ್ದ ಸಿದ್ಧರಾಮರು ಜಾತಿ, ಧರ್ಮವನ್ನು ಮೀರಿದ ಅನುಭಾವಿಗಳು. ಇವರು ಕಾಲಾನಂತರದಲ್ಲಿ ತಮ್ಮ ನಿರಂತರ ಸಾಧನೆಯಿಂದಾಗಿ ಮಹಾಶಿವಯೋಗಿಯಾದರು ಎಂದರು.
ಭೋವಿ ಸಮುದಾಯದವರು ತಮ್ಮ ಕಾಯಕದಿಂದಾಗಿ ಚದುರಿ ಹೋಗಿದ್ದು, ತಮ್ಮ ಅಸ್ಮಿತತೆಗಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಂಘಟಿತರಾಗಬೇಕಾದ ಅಗತ್ಯವಿದೆ. ಇದು ಶಕ್ತಿಯುತ ಸಂಘಟನೆಯಾಗಿ ಬೆಳೆದಲ್ಲಿ ಕೋರಿಕೆ ಬೇಡಿಕೆಗಳ ಈಡೇರಿಕೆಗೆ ಸಹಕಾರಿಯಾಗಲಿದೆ ಎಂದರು.
ಸಮುದಾಯದ ಜನರ ಕೋರಿಕೆಯಂತೆ ಸರ್ಕಾರದಿಂದ ನಿವೇಶನ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ನುಡಿದರು.
ಇದೇ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಗುರುತಿಸಿ, ನಗದು ಪುರಸ್ಕಾರ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸಂಸದ ಬಿ ವೈ ರಾಘವೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ, ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯ ನಾಯ್ಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ರವಿಕುಮಾರ್, ತಾಲೂಕು ಅಧ್ಯಕ್ಷ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
BREAKING: ‘ಗವಿಗಂಗಾಧರೇಶ್ವರ’ನ ಸ್ಪರ್ಶಿಸಿದ ‘ಸೂರ್ಯ ರಶ್ಮಿ’: ಕೌತುಕದಿಂದ ‘ಬೆಳಕಿನ ವಿಸ್ಮಯ’ ಕಣ್ತುಂಬಿಕೊಂಡ ಭಕ್ತರು