ಅಯೋಧ್ಯೆಯ ತಾತ್ಕಾಲಿಕ ದೇಗುಲದಲ್ಲಿ ಇರುವ ರಾಮ ಲಲ್ಲಾ ವಿಗ್ರಹವನ್ನು ಜನವರಿ 19ರಂದು ಹೊಸ ರಾಮ ಮಂದಿರಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳಿವೆ. ಹೀಗಾಗಿ, ಜನವರಿ 20ರಿಂದ ಮೂರು ದಿನಗಳ ಕಾಲ ಅದರ ದರ್ಶನ ಮಾಡಲು ಸಾಧ್ಯವಾಗಲಾರದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 22 ರಂದು ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಕಾರ್ಯಕ್ರಮಗಳು ನೆರವೇರಲಿದೆ. ಭದ್ರತಾ ಕಾರಣಗಳಿಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಲಭ್ಯವಿರುವ ಮಾಹಿತಿ ಪ್ರಕಾರ ಜ.20ರಿಂದ ಮೂರು ದಿನಗಳ ಕಾಲ ರಾಮಲಲ್ಲಾ ವಿರಾಜಮಾನ್ ವಿಗ್ರಹದ ದರ್ಶನ ಭಕ್ತರಿಗೆ ಲಭ್ಯವಾಗುವ ಸಾಧ್ಯತೆ ಇಲ್ಲವೆಂದು ಟ್ರಸ್ಟ್ ಪದಾಧಿಕಾರಿ ಹೇಳಿದ್ದಾರೆ. ಇದೇ ವೇಳೆ ದೇಗುಲದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಮಾತನಾಡಿ “ತಾತ್ಕಾಲಿಕ ಮಂದಿರದಲ್ಲಿ ಇರುವ ರಾಮಲಲ್ಲಾ ವಿರಾಜಮಾನ್ ವಿಗ್ರಹವನ್ನು ಜ.19ರಂದು ಸ್ಥಳಾಂತರ ಮಾಡುವ ಬಗ್ಗೆ ನನಗೂ ಮಾಹಿತಿಗಳು ಲಭ್ಯವಾಗಿದೆ’ ಎಂದು ಹೇಳಿದ್ದಾರೆ. ಹಾಲಿ ಇರುವ ರಾಮಲಲ್ಲ ಮೂರ್ತಿಯನ್ನು ಮಂದಿರದಲ್ಲಿ ಮುಂದಿನ ದಿನಗಳಲ್ಲಿ ಉತ್ಸವ ಮೂರ್ತಿಯಾಗಿ ಬಳಕೆ ಮಾಡುವ ಬಗ್ಗೆ ತೀರ್ಮಾನಿಸುವ ಸಾಧ್ಯತೆಗಳಿವೆ. ಅದನ್ನು ಹೊಸ ಮೂರ್ತಿಯ ಸಮೀಪವೇ ಇರಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಮತ್ತೂಂದೆಡೆ, ಭದ್ರತಾ ಕಾರಣಗಳಿಗಾಗಿ ಜ.16ರಿಂದ ಶುರುವಾಗಲಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆಗಳಿವೆಯಾಗಿದೆ.