ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಗ್ಯಾರಂಟಿ ಯೋಜನೆ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಜಾರಿಯಾಗುತ್ತಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಸಂಗತಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದ್ದ ಯುವ ನಿಧಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯದ ಯುವ ಸಮುದಾಯಕ್ಕೆ ಬೆನ್ನಲುಬಾಗಿ ನಿಂತು ಅವರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಅದರಲ್ಲೂ ಈ ಯುವನಿಧಿ ಯೋಜನೆಯೂ ಹೋರಾಟದ ನೆಲ, ಸರ್ವಜನಾಂಗದ ಶಾಂತಿಯ ತೋಟ ಎಂದು ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಮಲೆನಾಡಿನಿಂದ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಜಾರಿಯಾಗುತ್ತಿದೆ. ಇದು ರಾಜ್ಯದ ಜನತೆಗೆ ಐತಿಹಾಸಿಕ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಇದರ ಉಪಯೋಗವನ್ನು ರಾಜ್ಯದ ಯುವ ಸಮುದಾಯ ಸರ್ಮಪಕವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಇನ್ನು ಇದೇ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಶಿವಮೊಗ್ಗ ಜಿಲ್ಲೆಯ ಜನರ ಪರವಾಗಿ ಶಿವಮೊಗ್ಗ ನಗರದ ಹಳೆಯ ಜೈಲು ಕಟ್ಟಡದ ಈ ಆವರಣಕ್ಕೆ 12 ನೇ ಶತಮಾನದ ಶೂನ್ಯ ಸಿಂಹಾಸನಾಧ್ಯಕ್ಷ, ವೈರಾಗ್ಯನಿಧಿ ಅಲ್ಲಮಪ್ರಭು ಅವರ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಮಲೆನಾಡಿನ ರೈತರು ತಮ್ಮ ಜಮೀನು ಕಳೆದುಕೊಂಡು ಹಲವಾರು ವರ್ಷಗಳಿಂದ ಸಂಕಷ್ಟದಲ್ಲಿದ್ದು, ಅಂತಹ ರೈತರ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದ ಸಚಿವರು, ಅರಣ್ಯ ಪ್ರದೇಶಗಳಲ್ಲಿ ಕೃಷಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಡಿಸಿಎಂ ಡಿ ಕೆ ಶಿವಕುಮಾರ್, ಡಾ.ಎಂ.ಸಿ.ಸುಧಾಕರ್, ಕೆ.ಜೆ.ಜಾರ್ಜ್, ಬಿ.ನಾಗೇಂದ್ರ, ಮಂಕಾಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ, ಡಿ.ಜಿ.ಶಾಂತನಗೌಡ, ಶಾರದಾ ಪೂರ್ಯಾ ನಾಯ್ಕ್, ಡಿ.ಎಸ್.ಅರುಣ್, ಟಿ.ಡಿ.ರಾಜೇಗೌಡ, ಜಿ.ಹೆಚ್.ಶ್ರೀನಿವಾಸ, ಹೆಚ್.ಡಿ.ತಮ್ಮಯ್ಯ, ಭೀಮಣ್ಣ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
BREAKING: ದೇಶದ ಅತಿ ಉದ್ದದ ‘ಸಮುದ್ರ ಸೇತುವೆ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’ | Atal Setu inauguration
BIG UPDATE: ‘ತಡರಾತ್ರಿ ಪಾರ್ಟಿ’ ಕೇಸ್: ಪೊಲೀಸರ ಮುಂದೆ ವಿಚಾರಣೆ ಹಾಜರಾದ ‘ಸ್ಯಾಂಡಲ್ ವುಡ್ ಸೆಲೆಬ್ರೆಟೀಸ್’