ಉಡುಪಿ : ಕುಂದಾಪುರ ತಾಲೂಕಿನ ಉಳ್ತೂರು ಕಟ್ಟೆಮನೆಯ ಬೊಬ್ಬರ್ಯ ದೈವಸ್ಥಾನದ ಹಾಡಿಯಲ್ಲಿ ಶಾಸನ ಸಹಿತವಾದ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಪುರಾತತ್ವ ಸಂಶೋಧಕ ಪ್ರೊ. ಟಿ.ಮುರುಗೇಶಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಶಾಸನವನ್ನು ಒಂದು ಆಯತಾಕಾರದ ಶಿಲೆಯ ಮೇಲೆ ಚಿತ್ರಪಟ್ಟಿಕೆ ಸಹಿತವಾಗಿ ಚಿತ್ರಿಸಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಚಿತ್ರಪಟ್ಟಿಕೆ ಇದ್ದು, ಅದರ ಕೆಳಭಾಗದಲ್ಲಿ ನಾಲ್ಕು ಸಾಲಿನ ಬರಹವನ್ನು ಕೆತ್ತಲಾಗಿದೆ. ಶಾಸನವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ. ಶಾಸನವು ಶ್ರೀಗಣಾಧಿಪತಯೇ ನಮಃ ಎಂದು ಆರಂಭವಾಗಿದ್ದು, ಪ್ರಜೋತ್ಪತ್ತಿ ಸಂವತ್ಸರದ ಶು 10 ಲೂ ಲವಮಾಳುವನ ವಾಳೆಯ (ಹೆಸರು ನಷ್ಟವಾಗಿದೆ) ಹತನಾದ, ಮೃತ ವಾಳೆಯನ ನೆನಪಿಗೆ ಯಾರೋ (ಹೆಸರು ನಷ್ಟವಾಗಿದೆ) ಈ ವೀರಗಲ್ಲನ್ನು ಹಾಕಿಸಿದರು, ಶಾಸನ ಶುಭಮಸ್ತು ಎಂದು ಕೊನೆಯಾಗಿದೆ. ಶಾಸನದ ಚಿತ್ರಪಟ್ಟಿಕೆಯ ಮಧ್ಯಭಾಗದಲ್ಲಿ ಒಬ್ಬ ವೀರ ವೀರಭಂಗಿಯಲ್ಲಿ, ತನ್ನ ಬಲಗೈಯಲ್ಲಿ ಖಡ್ಗವನ್ನು ಎತ್ತಿಹಿಡಿದಿದ್ದು, ಎಡಗೈಯಲ್ಲಿ ಗುರಾಣಿಯನ್ನು ಹಿಡಿದು ನಿಂತಿರುವಂತೆ ಪ್ರಧಾನವಾಗಿ ಚಿತ್ರಿಸಲಾಗಿದೆ. ವೀರನ ಎಡಭಾಗದಲ್ಲಿ ಛತ್ರವನ್ನು ಹಿಡಿದು ನಿಂತಿರುವ ವ್ಯಕ್ತಿಯೊಬ್ಬನ ಶಿಲ್ಪವಿದೆ. ಬಲಭಾಗದಲ್ಲಿ ನಿಂತಿರುವ ವ್ಯಕ್ತಿ ತನ್ನ ಎಡಗೈಯ ಕತ್ತಿಯಿಂದ ತನ್ನ ಹೊಟ್ಟೆಯನ್ನು ಇರಿದುಕೊಂಡಿದ್ದು, ಬಲಗೈಯಲ್ಲಿ ಗುರಾಣಿಯಿದೆ. ಈ ಶಿಲ್ಪಗಳ ಮೇಲ್ಭಾಗದಲ್ಲಿ ಚಂದ್ರ ಮತ್ತು ಸೂರ್ಯರ ಉಬ್ಬು ಶಿಲ್ಪಗಳಿವೆ. ಚಿತ್ರಪಟ್ಟಿಕೆ ಒಂದು ನಿರೂಪಣಾತ್ಮಕ ಶಿಲ್ಪವಾಗಿದ್ದು, ಚರಿತ್ರೆಯ ಘಟನಾವಳಿಯೊಂದನ್ನು ಸುಂದರವಾಗಿ ನಿರೂಪಿಸಿದೆ.ಶಾಸನದಲ್ಲಿ ನೀಡಿರುವ ಕಾಲದ ವಿವರಗಳು, ಕಾಲಮಾನವನ್ನು ನಿರ್ಧರಿಸಲು ಸಾಕಾಗುವುದಿಲ್ಲ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ ಇದ್ನು 15-16ನೇ ಶತಮಾನದ ಶಾಸನವೆಂದು ನಿರ್ಧರಿಸಬಹುದಾಗಿದೆ. ಶಾಸನೋಕ್ತ ವಿವರಗಳು ಮತ್ತು ಚಿತ್ರಿತ ಶಿಲ್ಪಗಳ ಅಧ್ಯಯನದಿಂದ, ಶಾಸನೋಕ್ತ ಲವ ಆಳುವ ಯಾವುದೋ ಘಟನೆಯಲ್ಲಿ ಮರಣ ಹೊಂದಿದ್ದು, ಆತನ ವಾಳೆರ ಅಥವಾ ವೇಳೆವಾಳಿ ತನ್ನ ಯಜಮಾನನ ಮರಣಾ ನಂತರ ತನ್ನನ್ನು ತಾನೆ ಇರಿದು ಕೊಂಡು ಮರಣ ಹೊಂದಿದ್ದಾನೆಂದು ತಿಳಿಯಬಹುದಾಗಿದೆ. ಶಾಸನವು ಗುಳ್ಳಾಡಿಯ ಕೋಟೆಯ ಹೊರಭಾಗದ ಹಾಡಿಯಲ್ಲಿದೆ. ಗುಳ್ಳಾಡಿಯಲ್ಲಿ ಆಳುಪ ರಾಣಿ ಹಾಗೂ ಹೊಯ್ಸಳ 3ನೇ ವೀರ ಬಲ್ಲಾಳನ ಪಟ್ಟದರಸಿ ಚಿಕ್ಕಾಯಿ ತಾಯಿಯ ಶಾಸನವಿದೆ. ಗುಳ್ಳಾಡಿ ಕೋಟೆಯಿಂದ ಆವೃತ್ತವಾದ ಒಂದು ಹಳ್ಳಿಯಾಗಿದ್ದು, ಚಿಕ್ಕಾಯಿ ತಾಯಿಯ ಮಾತೃಮೂಲ ಮನೆಯಾಗಿದ್ದಂತೆ ಕಂಡುಬರುತ್ತದೆ. ಆಳುಪ ಅರಸಿಯರು ತಮ್ಮ ಮಾತೃಮೂಲ ಮನೆಗಳಲ್ಲಿಯೇ ಇದ್ದ ಬಗ್ಗೆ ಆಳುಪ ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ಶಾಸನೋಕ್ತ ಲವ ಆಳುವ ಈ ರಾಜ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದು ಆತನ ಮರಣಾ ನಂತರ ಆತನ ವೇಳೆವಾಳಿ ತಾನೆ ಇರಿದುಕೊಂಡು ಮೃತಪಟ್ಟಿದ್ದಾನೆ. ಈ ವೀರಗಲ್ಲನ್ನು ಸ್ಥಳೀಯರು ಬೊಬ್ಬರ್ಯನ ಕಲ್ಲು ಎಂದು ಆರಾಧಿಸುತ್ತಿರುವುದು ಅತ್ಯಂತ ಕುತೂಹಲದ ಸಂಗತಿಯಾಗಿದೆ. ಅಂದಿನ ಸಾಮಾಜಿಕ ಅಂತಸ್ತಿನಲ್ಲಿ ವಳೆರಾ ಅಥವಾ ವೇಳೆವಾಳಿಯ ಅಂತ್ಯಸಂಸ್ಕಾರವನ್ನು ಗುಳ್ಳಾಡಿ ಗ್ರಾಮದ ಹೊರವಲಯದಲ್ಲಿ ನಡೆಸಿರಬೇಕು ಎಂದು ಅಂದಾಜಿಸಬಹು ದಾಗಿದೆ ಎಂದು ಡಾ.ಮುರಗೇಶಿ ತಿಳಿಸಿದ್ದಾರೆ.ಗುಳ್ಳಾಡಿಯ ಸುತ್ತಮುತ್ತ ಪುರಾತತ್ವ ಅನ್ವೇಷಣೆ ನಡೆಸಲು ಕಾರಣಕರ್ತರಾದ ಗುಳ್ಳಾಡಿಯ ಡಾ. ರಘುರಾಮ ಶೆಟ್ಟಿ, ಬೊಬ್ಬರ್ಯ ದೈವಸ್ಥಾನದ ಅನುವಂಶಿಕ ಮೊಕ್ತೇಸರ ಸೀತಾರಾಮ ಶೆಟ್ಟಿ ಅವರಿಗೆ, ಬೇಳೂರು ಗ್ರಾಪಂ ಅಧ್ಯಕ್ಷರಾದ ಜಯಶೀಲ ಶೆಟ್ಟಿ, ರವಿರಾಜ್ ಶೆಟ್ಟಿ ಹಾಗೂ ತನ್ನ ವಿದ್ಯಾರ್ಥಿಗಳಿಗೆ ಆಭಾರಿಯಾಗಿದ್ದೇನೆ ಎಂದು ಡಾ.ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆಯಾಗಿದೆ.