ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) 150 ಕ್ಕೂ ಹೆಚ್ಚು ಸಶಸ್ತ್ರ ಭದ್ರತಾ ಕಮಾಂಡೋಗಳು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾವಲು ಕಾಯಲಿದ್ದಾರೆ.
ಅಧಿಕೃತ ಮೂಲಗಳು ಮಂಗಳವಾರ ಈ ಮಾಹಿತಿಯನ್ನು ನೀಡಿವೆ. ಜನವರಿ 22 ರಂದು ರಾಮ ಜನ್ಮಭೂಮಿ ದೇವಾಲಯದಲ್ಲಿ ರಾಮ್ ಲಲ್ಲಾ ಅವರ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ಕೇಂದ್ರ ಗೃಹ ಸಚಿವಾಲಯ ಈ ಕ್ರಮಕ್ಕೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಅಯೋಧ್ಯೆಧಾಮದ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇಂದ್ರ ಪಡೆಗಳ ವಿಶೇಷ ವಾಯುಯಾನ ಭದ್ರತಾ ಗುಂಪು (ಎಎಸ್ಜಿ) ಕಾವಲು ಕಾಯುತ್ತಿರುವ ದೇಶದ 68 ನೇ ನಾಗರಿಕ ವಿಮಾನ ನಿಲ್ದಾಣವಾಗಿದೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸಿಐಎಸ್ಎಫ್ ಭಯೋತ್ಪಾದನಾ ವಿರೋಧಿ ಮತ್ತು ವಿಧ್ವಂಸಕ ವಿರೋಧಿ ಭದ್ರತೆಯನ್ನು ಒದಗಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023 ರ ಡಿಸೆಂಬರ್ನಲ್ಲಿ ಉದ್ಘಾಟಿಸಿದರು.
ಇತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಪಡೆ ಪ್ರಯಾಣಿಕರು ಮತ್ತು ಅವರ ಸಾಮಾನುಗಳನ್ನು ಪರೀಕ್ಷಿಸುತ್ತದೆ ಮತ್ತು ಇಡೀ ವಿಮಾನ ನಿಲ್ದಾಣದ ಆವರಣದ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆ ವಿಮಾನ ನಿಲ್ದಾಣದ ಭದ್ರತೆಗಾಗಿ ಡೆಪ್ಯುಟಿ ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ 150 ಕ್ಕೂ ಹೆಚ್ಚು ಸಿಐಎಸ್ಎಫ್ ಸಿಬ್ಬಂದಿಯ ಸಶಸ್ತ್ರ ತುಕಡಿಯನ್ನು ಗೃಹ ಸಚಿವಾಲಯ (ಎಂಎಚ್ಎ) ಅನುಮೋದಿಸಿದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣವನ್ನು ಹಂತಹಂತವಾಗಿ ಒಟ್ಟು 821 ಎಕರೆಗೆ ವಿಸ್ತರಿಸಲಾಗುವುದು. ಅಯೋಧ್ಯೆಯಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣದಲ್ಲಿ ಅಪಾಯದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅದರ ಭದ್ರತೆಯನ್ನು ಸಿಐಎಸ್ಎಫ್ಗೆ ವಹಿಸಲಾಗುವುದು ಎನ್ನಲಾಗಿದೆ.