ತನ್ನ ಮಗುವನ್ನೇ ಹತ್ಯೆ ಮಾಡಿ ಸೂಟ್ಕೇಸ್ನಲ್ಲಿ ಸಾಗಿಸಿದ ಆರೋಪದ ಮೇಲೆ ಸ್ಟಾರ್ಟ್ ಅಪ್ ಕಂಪನಿಯಾಗಿರುವ ಮೈಂಡ್ಫುಲ್ ಎಐ ಲ್ಯಾಪ್ ಫೌಂಡರ್ ಮತ್ತು ಸಿಇಓ ಸುಚನ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಸುಚನ ಸೇಠ್ ಗೋವಾದ ಹೋಟೆಲ್ವೊಂದರಲ್ಲಿ ತನ್ನ ನಾಲ್ಕು ವರ್ಷದ ಮಗುವಿನೊಂದಿಗೆ ತಂಗಿದ್ದರು. ಬಳಿಕ ಸೂಟ್ಕೇಸ್ ಹಿಡಿದುಕೊಂಡು ಬೆಂಗಳೂರಿಗೆ ಹೊರಟಿದ್ದಾರೆ. ಟ್ಯಾಕ್ಸಿ ಹಿಡಿದು ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆಗಿದ್ದ ಮಗು ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸುಚನ ಸೇಠ್, ಸಂಬಂಧಿಕರ ಮನೆಗೆ ಕಳುಹಿಸಿದ್ದೇನೆ ಎಂದು ಸುಳ್ಳು ಹೇಳಿ ಅಲ್ಲಿಂದ ನಿರ್ಗಮಿಸಿದ್ದರು. ಬಳಿಕ ಟ್ಯಾಕ್ಸಿ ಏರಿ ಬೆಂಗಳೂರಿನತ್ತ ಬಂದಿದ್ದಾರೆ. ಹೋಟೆಲ್ ಸಿಬ್ಬಂದಿಗೆ ಸುಚನ ಸೇಠ್ ಮೇಲೆ ಅನುಮಾನ ಬಂದಿದ್ದು, ಬಳಿಕ ರೂಂ ಸ್ವಚ್ಛಗೊಳಿಸುವ ಸಮಯದಲ್ಲಿ ರಕ್ತದ ಕಲೆಗಳು ಕಾಣಸಿಕ್ಕಿವೆ. ತಕ್ಷಣವೇ ಹೋಟೆಲ್ನವರು ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋವಾ ಪೊಲೀಸರು ಈ ವಿಚಾರ ಗೊತ್ತಾಗುತ್ತಿದ್ದಂತೆ ಕಾರಿನ ಚಾಲಕನನ್ನು ಸಂಪರ್ಕಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಪೊಲೀಸ್ ಠಾಣೆ ಬಳಿ ಕಾರು ನಿಲ್ಲಿಸುವಂತೆ ಹಾಗೂ ಮಹಿಳೆಗೆ ಅನುಮಾನ ಬಾರದಂತೆ ನಿಲ್ಲಿಸಬೇಕು ಎಂದು ಕಾರಿನ ಚಾಲಕನಿಗೆ ಸೂಚನೆ ನೀಡಿದ್ದಾರೆ. ಅದರಂತೆಯೇ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಐಮಂಗಲ ಠಾಣೆ ಬಳಿ ಕಾರು ಚಾಲಕ ಟ್ಯಾಕ್ಸಿ ನಿಲ್ಲಿಸಿದ್ದಾನೆ. ಈ ನಡುವೆ ಗೋವಾ ಪೊಲೀಸರು, ಚಿತ್ರದುರ್ಗದ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಚಿತ್ರದುರ್ಗದ ಪೊಲೀಸರು ಕಾರಿನ ಸೂಟ್ಕೇಸ್ ಪರಿಶೀಲಿಸಿದಾಗ ಮಗುವಿನ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಸುಚನ ಸೇಠ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮಗುವಿನ ಕೊಲೆಗೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಘಟನೆಯ ಸಂಬಂಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.