ಬೆಂಗಳೂರು : ಎರಡು ಗಂಟೆ ಸಮಯದಲ್ಲಿ ರಸ್ತೆ ಪ್ರಯಾಣದ ಮೂಲಕ ತಲುಪಬಲ್ಲ ರಾಜ್ಯದ ವಿಮಾನ ನಿಲ್ದಾಣಗಳ ಸುತ್ತಮುತ್ತ ಪ್ರದೇಶಗಳಲ್ಲಿ ಐದರಿಂದ ಹತ್ತು ಸಾವಿರ ಎಕರೆಯಷ್ಟು ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ರಾಜ್ಯದಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂ (ಐಕೆಎಫ್) ಪುನಾರಚನೆ ಯಾದ ಬಳಿಕ ಇದೇ ಮೊದಲ ಬಾರಿಗೆ ಫೋರಂನ ಅಧ್ಯಕ್ಷ ಉದ್ಯಮಿ ಸಜ್ಜನ್ ಜಿಂದಾಲ್ ಸೇರಿ ಇನ್ನಿತರೆ ನಿರ್ದೇಶಕರೊಂದಿಗೆ ಮಂಗಳವಾರ ನಡೆಸಿದ ಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಸಜ್ಜನ್ ಜಿಂದಾಲ್ ಅವರು ಕರ್ನಾಟಕದಲ್ಲಿ ನೆಲೆಸಿರುವ ಒಬ್ಬ ಉದ್ಯಮಿಯಾಗಿ ಈ ರಾಜ್ಯದಲ್ಲಿ ಹೂಡಿಕೆ ಮಾಡುವುದು ಎಷ್ಟು ಸೂಕ್ತ ಎಂಬುದು ನನಗೆ ಚೆನ್ನಾಗಿ ಗೊತ್ತು. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳಿಂದ ಸುಮಾರು 2 ಗಂಟೆ ರಸ್ತೆ ಪ್ರಯಾಣದ ಮೂಲಕ ತಲುಪಬಹುದಾದ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸಿದರೆ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ಸೆಳೆಯಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಇದಕ್ಕೆ, ಪ್ರತಿಕ್ರಿಯಿಸಿದ ಸಚಿವರು, ಸುಮಾರು 5ರಿಂದ 10 ಸಾವಿರ ಎಕರೆಗಳಲ್ಲಿ ಇಂತಹ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೂ ಇದೆ. ಈ ಪಾರ್ಕುಗಳಲ್ಲಿ ಉದ್ದಿಮೆ ಸ್ಥಾಪನೆಗೆ ಅನುಕೂಲವಾಗುವಂತೆ ಪ್ಲಗ್ – ಇನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.