ಬೆಂಗಳೂರು: ಸ್ವಪಕ್ಷದ ವಿರುದ್ಧವೆ ಮಾಜಿ ಸಚಿವ ವಿ. ಸೋಮಣ್ಣ ಆಗಾಗ ಅಸಮಾಧಾನ ಹೊರಹಾಕುತ್ತಿದ್ದು, ಇತೀಚಿಗೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಸ್ವಪಕ್ಷೀಯರೇ ಕಾರಣ ಎಂದು ಅಸಮಾಧಾನಗೊಂಡಿರುವ ಅವರು ವರಿಷ್ಠರಿಗೆ ದೂರು ನೀಡುವ ಸಂಬಂಧ ಸೋಮವಾರ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಚಾಮರಾಜನಗರದಲ್ಲಿ ನನ್ನ ಸೋಲಿಗೆ ಕಾರಣರಾದವರ ಜತೆಗೆ ಅಂಟಿಕೊಂಡು ತೆರೆಮರೆಯಲ್ಲಿ ರಾಜಕಾರಣ ನಡೆಸಲು ಹೋದರೆ
ನಾನು ಸಿಡಿದೇಳುತ್ತೇನೆ ಎಂದು ಶನಿವಾರವಷ್ಟೇ ಅವರು ಖಾರವಾಗಿ ಹೇಳಿದ್ದರು.
ಮಂಗಳವಾರ ಅಥವಾ ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತಿತರರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಲಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಪ್ರಧಾನಿ ನರೇಂದ್ರಮೋದಿ ಅವರನ್ನೂ ಭೇಟಿ ಮಾಡುವ ಉದ್ದೇಶವನ್ನು ಸೋಮಣ್ಣ ಅವರು ಹೊಂದಿದ್ದು, ಭೇಟಿಯ ಲಭ್ಯತೆ ಮೇಲೆ ನಿರ್ಧಾರವಾಗಲಿದೆ. ಸೋಮಣ್ಣ ಅವರ ಈ ದೆಹಲಿ ಭೇಟಿ ಬಳಿಕ ಮುಂದಿನ ರಾಜಕೀಯ ದಾರಿಯೂ ಸ್ಪಷ್ಟವಾಗುವ ಸಾಧ್ಯತೆಯಿದೆ.
ವರಿಷ್ಠರಿಂದ ಸ್ಥಾನಮಾನದ ಬಗ್ಗೆ ಸಷ್ಟ ಭರವಸೆ ಸಿಕ್ಕಲ್ಲಿ ಬಿಜೆಪಿಯಲ್ಲೇ ಮುಂದುವರೆಯಲಿದ್ದಾರೆ. ಒಂದು ವೇಳೆ ನಿರೀಕ್ಷಿತ ಭರವಸೆ ಸಿಗದೇ ಇದ್ದಲ್ಲಿ ಪಕ್ಷ ತೊರೆಯುವಂಥ ಕಠಿಣ ಕ್ರಮಕ್ಕೂಮುಂದಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಪಾಡಿಕೊಂ ಡಿರುವ ಸೋಮಣ್ಣ ಅವರು ಆಗಾಗ ಪಕ್ಷದ ನಾಯಕರ ವಿರುದ್ಧ ಹರಿಹಾಯುತ್ತಲೇ ಇದ್ದಾರೆ.