ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಹೀಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಮಕ್ಕಳಿಗೆ ‘ರೆಡಿ ಟು ಮಿಕ್ಸ್’ ಆಹಾರ ನೀಡಲು ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಅಂಗನವಾಡಿಗಳಲ್ಲಿ ಸಿರಿಧಾನ್ಯಗಳ ಲಡ್ಡು, ಕಿಚಡಿ, ಸಾಂಬಾರ್ ಮೊದಲಾದವುಗಳನ್ನು ಫಟಾ ಫಟ್ ಎಂದು ಶೀಘ್ರವಾಗಿ ಮಕ್ಕಳಿಗೆ ನೀಡಬಹುದಾಗಿದೆ.
ಸಾಂಬಾರ್ ತಯಾರಿಸಲು ಬೇಕಾದ ವಿವಿಧ ಪದಾರ್ಥಗಳ ಬದಲಿಗೆ ಒಗ್ಗರಣೆ ಮಿಶ್ರಣದ ಪುಡಿ ನೀಡಲಾಗುತ್ತದೆ. ತೊಗರಿಬೇಳೆ ಬೇಯಿಸಿ ಈ ಪುಡಿಯನ್ನು ಹಾಕಿದರೆ ಸಾಂಬಾರು ಸಿದ್ಧವಾಗುತ್ತದೆ. ಇಲ್ಲಿಯವರೆಗೆ ಅಂಗನವಾಡಿಗಳಲ್ಲಿ 3 – 6 ವರ್ಷದೊಳಗಿನ ಮಕ್ಕಳಿಗೆ ಮೊದಲು ಬೆಳಗಿನ ಉಪಾಹಾರಕ್ಕೆ ಬೆಲ್ಲ ಮತ್ತು ಶೇಂಗಾ ಬೀಜ ಮಿಶ್ರಿತ ಚಿಕ್ಕಿ ನೀಡಲಾಗುತ್ತಿತ್ತು. ಇನ್ನೂ ಮುಂದೆ ಬೆಳಗಿನ ಉಪಾಹಾರಕ್ಕೆ ಮಕ್ಕಳಿಗೆ ಒಂದು ದಿನ ಬೆಲ್ಲಮಿಶ್ರಿತ ಪುಡಿಯನ್ನು ನೀಡಿದರೆ ಮತ್ತೊಂದು ದಿನ ಸಿರಿಧಾನ್ಯಗಳ ಲಡ್ಡುವನ್ನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಅಕ್ಕಿ ಮತ್ತು ತೊಗರಿಬೇಳೆ ಖರೀದಿಗಷ್ಟೇ ಹಣ ನೀಡಲಾಗುತ್ತದೆಯಾಗಿದೆ.