ಬೆಂಗಳೂರು: ಚಿತ್ರಕಲಾ ಪರಿಷತ್ತು ಚಿತ್ರಸಂತೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಚಿತ್ರಕಲಾ ಪರಿಷತ್ತು ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ನಗರದ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 21ನೇ ಚಿತ್ರಸಂತೆ ಕಾರ್ಯಕ್ರಮಕ್ಕೆ ಸಹಿ ಮಾಡುವ ಮೂಲಕ ಚಾಲನೆ ನೀಡಿ, ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಎಲ್ಲಾ ಜಿಲ್ಲೆಗಳಲ್ಲಿ ವಸ್ತು ಸಂಗ್ರಹಾಲಯ ಹಾಗೂ ಆರ್ಟ್ ಗ್ಯಾಲರಿ ಸ್ಥಾಪಿಸಲು ಸರ್ಕಾರ ಸಹಕಾರ ನೀಡಲಿದೆ. ಈ ಬಾರಿ ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗುವುದು ಎಂದರು.
2003 ರಿಂದ ಚಿತ್ರಕಲಾ ಪರಿಷತ್ತು ವತಿಯಿಂದ ಪ್ರತಿ ವರ್ಷ ಚಿತ್ರಸಂತೆಯನ್ನು ಆಚರಣೆ ಮಾಡಿಕೊಂಡು ಬರುತ್ತಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ನಡೆದ ಚಿತ್ರಸಂತೆಯನ್ನು ಉದ್ಘಾಟಿಸಿದ್ದೇನೆ. ಇಂದು 6ನೇ ಬಾರಿ ಚಿತ್ರಸಂತೆಯನ್ನು ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಚಿತ್ರಸಂತೆಯು ಸಂಜೆಯವರೆಗೂ ನಡೆಯಲಿದ್ದು, 22 ರಾಜ್ಯಗಳಿಂದ ಸುಮಾರು 1682 ಕಲಾವಿದರು ಈ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸುಮಾರು 3 ರಿಂದ 4 ಲಕ್ಷ ಜನರು ಚಿತ್ರಸಂತೆಯನ್ನು ವೀಕ್ಷಿಸಲಿದ್ದಾರೆ. ಈ ಬಾರಿಯ ಚಿತ್ರಸಂತೆಯನ್ನು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಿರುವುದು ಅವರಿಗೆ ಸಲ್ಲಿಸಿರುವ ವಿಷೇಷ ಗೌರವವನ್ನು ಸೂಚಿಸುತ್ತದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, 21 ವರ್ಷಗಳಿಂದ ಚಿತ್ರಸಂತೆಯನ್ನು ಸತತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಬಹಳಷ್ಟು ಕಲಾವಿದರಿದ್ದಾರೆ. ಅವರ ಕಲೆಯನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಕಲೆ ಮತ್ತು ಸಂಸ್ಕøತಿಯ ಭವ್ಯಪರಂಪರೆಯನ್ನು ಉಳಿಸಿಕೊಂಡು ಹೋಗುವಂತಹ ಕೆಲಸವನ್ನು ಚಿತ್ರಕಲಾ ಪರಿಷತ್ತು ಮಾಡುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸಲು ಉತ್ತಮ ವೇದಿಕೆಯನ್ನು ನಿರ್ಮಿಸಿದೆ. ಇಂದು ನಡೆಯುವ ಚಿತ್ರಸಂತೆಯು ಯಶಸ್ವಿಯಾಗಲಿ. ಮುಂದಿನ ದಿನಗಳಲ್ಲಿ ಚಿತ್ರಕಲಾ ಕಾಲೇಜನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ 21 ನೇ ಬಾರಿಗೆ ಚಿತ್ರಸಂತೆಯನ್ನು ಹಮ್ಮಿಕೊಳ್ಳÀಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಈ ಬಾರಿಯ ಚಿತ್ರಸಂತೆಯನ್ನು ಸಮರ್ಪಣೆ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಚಿತ್ರಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸಲು ಸುಮಾರು 2900 ಅರ್ಜಿಗಳು ಬಂದಿದ್ದು, ಕೇವಲ 1682 ಜನರಿಗೆ ಮಾತ್ರ ಅವಕಾಶವನ್ನು ಕಲ್ಪಿಸÀಲಾಗಿದೆ. ಮಳಿಗೆಗಳಿಗೆ ಕುಮಾರ ಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ, ಗಾಂಧಿ ಭವನ ರಸ್ತೆ, ಸ್ಟೀಲ್ ಬ್ರಿಡ್ಜ್ ಸಮೀಪದಲ್ಲಿಯೂ ಸ್ಥಳಾವಕಾಶ ನೀಡಲಾಗಿದೆ. ವಿಶೇಷ ಚೇತನರಿಂದ ಸುಮಾರು 205 ಅರ್ಜಿಗಳು ಬಂದಿದ್ದು, ಎಲ್ಲರಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಅರ್ಜಿ ಹಾಕಿದ ಎಲ್ಲಾ ಹಿರಿಯ ನಾಗರಿಕರಿಗೂ ಕೂಡ ಅವಕಾಶ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಶಾಸಕರಾದ ರಿಜ್ವಾನ್ ಅರ್ಷದ್, ಶಾಸಕರು ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಅಜಯ್‍ಸಿಂಗ್, ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಾದ ಪ್ರಭಾಕರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.