ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅತಿಥಿ ಉಪನ್ಯಾಸಕರ ನಿಯೋಗ ಭೇಟಿ ಮಾಡಿ, ಬೇಡಿಕೆಯ ಮನವಿ ಸಲ್ಲಿಸಿತ್ತು. ಅಲ್ಲದೇ ಈ ಸಂಬಂಧ ಮಹತ್ವದ ಚರ್ಚೆಯನ್ನು ಅವರೊಂದಿಗೆ ಮಾಡಿತ್ತು. ಇಂದಿನ ಸಭೆಯಲ್ಲಿ ಅತಿಥಿ ಉಪನ್ಯಾಸಕರ ಗೌರವಧನವನ್ನು 5,000ದಿಂದ 8,000ಕ್ಕೆ ಹೆಚ್ಚಳ ಮಾಡೋದಕ್ಕೆ ಸಿಎಂ ಸಿದ್ಧರಾಮಯ್ಯ ಸಮ್ಮತಿಸಿದ್ದಾರೆ. ಅಲ್ಲದೇ ಕೆಲ ಬೇಡಿಕೆ ಈಡೇರಿಕೆಗೂ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅತಿಥಿ ಉಪನ್ಯಾಸಕರು ಮುಷ್ಕರವನ್ನು ವಾಪಾಸ್ ಪಡೆದಿರೋದಾಗಿ ತಿಳಿದು ಬಂದಿದೆ.
ಅತಿಥಿ ಉಪನ್ಯಾಸಕರ ಬೇಡಿಕೆ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ,ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಹಾಗೂ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅತಿಥಿ ಉಪನ್ಯಾಸಕರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಚರ್ಚೆಯ ನಂತರ ಸರ್ಕಾರ ಕೈಗೊಂಡ ನಿರ್ಧಾರಗಳು ಹೀಗಿವೆ.
1)ಮಹಿಳಾ ಅತಿಥಿ ಉಪನ್ಯಾಸಕರಿಗೆ ಇದೇ ಜನವರಿ ತಿಂಗಳಿನಿಂದ ಜಾರಿಗೆ ಬರುವಂತೆ ಮೂರು ತಿಂಗಳ ಕಾಲ ಹೆರಿಗೆ ರಜೆಯನ್ನು ಸಂಬಳ ಸಹಿತ ನೀಡಲು ನಿರ್ಧರಿಸಲಾಗಿದೆ.
2) ಅತಿಥಿ ಉಪನ್ಯಾಸಕರ ಮೆರಿಟ್ ಆಧರಿಸಿ, ಸ್ವ ಇಚ್ಛೆ ವ್ಯಕ್ತಪಡಿಸಿದಲ್ಲಿ ಹಾಲಿ ಇರುವ ಕಾಲೇಜಿನಲ್ಲೇ ಕೌನ್ಸಿಲಿಂಗ್ ಗೆ ಒಳಪಡದೆ ಮುಂದುವರೆಯಲು ಅವಕಾಶ .
3) ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ರಜೆ ನೀಡುವ ಕುರಿತು ಪರಿಶೀಲಿಸಲಾಗಿದ್ದು, ರಜೆಯ 01 ದಿನದ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸುವ ಷರತ್ತಿಗೊಳಪಟ್ಟು 15/19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಮಾಸಿಕ 01 ದಿನ ರಜೆಯನ್ನು ನೀಡಲು ತೀರ್ಮಾನಿಸಲಾಗಿದೆ.
ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಅರ್ಜಿಗಳನ್ನು ಕರೆಯದೆ, Document Verification ಮಾಡುವುದರ ಬದಲು ಹಿಂದಿನ ವರ್ಷದ ಅರ್ಜಿಯನ್ನೇ ನಂತರದ ವರ್ಷಗಳಲ್ಲಿನ ಆಯ್ಕೆಗೆ ಪರಿಗಣಿಸುವ ಬಗ್ಗೆ ಪರಿಶೀಲಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಆಯ್ಕೆಯಾದ ಅತಿಥಿ ಉಪನ್ಯಾಸಕರ ದಾಖಲೆಗಳ Centralized Data-base ಅನ್ನು ಸೃಜಿಸಿ, ನಿರ್ವಹಿಸಲು ತೀರ್ಮಾನಿಸಲಾಗಿದೆ.
ಹಿಂದಿನ ಸೇವೆಯನ್ನು ಆಧರಿಸಿ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಿ, ಅವರಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕೃಪಾಂಕವನ್ನು ನೀಡುವುದರ ಬಗ್ಗೆ ಪರಿಶೀಲಾಗಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಉಮಾದೇವಿ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿಗೊಳಿಸಲು ಅವಕಾಶ ಇಲ್ಲದಿರುವುದರಿಂದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರು, ತಾಂತ್ರಿಕ ಶಿಕ್ಷಣ ಇಲಾಖೆಯ ಇಂಜಿನಿಯರಿಂಗ್ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಪಾಲಿಟೆಕ್ನಿಕ್ ಉಪನ್ಯಾಸಕರುಗಳ ಮುಂದಿನ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಕನಿಷ್ಠ 05 ವರ್ಷಗಳಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಪ್ರತಿ ವರ್ಷ ಶೇ.1 ರಂತೆ ಗರಿಷ್ಠ ಶೇ.5 ರಷ್ಟು ಕೃಪಾಂಕ (Weightage) ನೀಡುವ ಅವಕಾಶವನ್ನು ವಿಶೇಷ ನಿಯಮಗಳಲ್ಲಿ ಅಳವಡಿಸಲು ತೀರ್ಮಾನಿಸಲಾಗಿ ದೆ.
4) 10/15 ವರ್ಷಗಳಿಗೂ ಹೆಚ್ಚಿನ ಅವಧಿಗೆ ಸೇವೆ ಸಲ್ಲಿಸಿ, 60 ವರ್ಷ ಮೀರಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಇಲ್ಲದಿರುವುದರಿಂದ ಇವರಿಗೆ ಭದ್ರತಾ ರೂಪದಲ್ಲಿ ಇಡಿಗಂಟು ಸೌಲಭ್ಯವನ್ನು ಅವರುಗಳು ಸಲ್ಲಿಸಿರುವ ಸೇವಾ ಅವಧಿ ಪರಿಗಣಿಸಿ ವಾರ್ಷಿಕ ರೂ.50,000/- ಮೊತ್ತದಂತೆ (ಉದಾಹರಣೆಗೆ 10 ವರ್ಷ ಸೇವೆ ಸಲ್ಲಿಸಿದಲ್ಲಿ 10 ವರ್ಷ x ರೂ.50000/- = ರೂ.5,00,000/-) ಇಡಿಗಂಟು ನೀಡಲು ತೀರ್ಮಾನಿಸಲಾಗಿದೆ.
5) ಅತಿಥಿ ಉಪನ್ಯಾಸಕರ ಆರೋಗ್ಯದ ದೃಷ್ಟಿಯಿಂದ ಅವರ ಕುಟುಂಬದ ಎಲ್ಲರಿಗೂ ವಾರ್ಷಿಕ ರೂ.5.00 ಲಕ್ಷಗಳ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ ರೂ.400/- ಸ್ವೀಕರಿಸಿ ಅಷ್ಟೇ ಮೊತ್ತದ ವಂತಿಗೆಯನ್ನು (ಅತಿಥಿ ಉಪನ್ಯಾಸಕರಿಂದ ರೂ.400 + ಸರ್ಕಾರದಿಂದ ರೂ.400 ಒಟ್ಟು ರೂ.800) ಸರ್ಕಾರದಿಂದ ಭರಿಸಿ ಆರೋಗ್ಯ ವಿಮಾ ಸೌಲಭ್ಯವನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಸದರಿ ಸೌಲಭ್ಯವನ್ನು ಒದಗಿಸಲು ಸರ್ಕಾರಕ್ಕೆ ವಾರ್ಷಿಕ ಅಂದಾಜು ರೂ.68 ಕೋಟಿಗಳ ಅನುದಾನ ಅವಶ್ಯವಿರುತ್ತದೆ.
6) ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಗೌರವಧನಕ್ಕೆ ಅವರ ಸೇವೆಯನ್ನು ಪರಿಗಣಿಸಿ ಐದು ವರ್ಷ ಪೂರೈಸಿದವರಿಗೆ ರೂ6000 ಹೆಚ್ಚಳ, ಹತ್ತು ವರ್ಷ ಪೂರೈ ಸಿದವರಿಗೆ ರೂ.ರೂ7000 ಹೆಚ್ಚಳ, ಹಾಗೂ 15 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ಋ ರೂ 8000 ಹೆಚ್ಚಳ ಮಾಡಲು ನಿರ್ಧರಿಸಲಾಯಿತು. ಹೆಚ್ಚುವರಿಯಾಗಿ ಪಾವತಿಸಲು ತೀರ್ಮಾನಿಸಲಾಗಿದೆ. ಸದರಿ ಹೆಚ್ಚುವರಿ ಮೊತ್ತವನ್ನು ಒದಗಿಸಲು ಸರ್ಕಾರಕ್ಕೆ ವಾರ್ಷಿಕ ಅಂದಾಜು ರೂ.84.00 ಕೋಟಿಗಳ ಅನುದಾನ ಅವಶ್ಯವಿರುತ್ತದೆ.
ಅತಿಥಿ ಉಪನ್ಯಾಸಕರ ಬೇಡಿಕೆ/ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸರ್ಕಾರವು ಇಚ್ಛಾಶಕ್ತಿ, ಬದ್ದತೆಯಿಂದ ಮೇಲಿನಂತೆ ತೀರ್ಮಾನಗಳನ್ನು ಕೈಗೊಂಡಿರುತ್ತದೆ.
Covid19 Update: ರಾಜ್ಯದಲ್ಲಿಂದು ‘297 ಜನ’ರಿಗೆ ‘ಕೊರೋನಾ ಪಾಸಿಟಿವ್’: ‘320 ಮಂದಿ’ ಸೋಂಕಿತರು ಗುಣಮುಖ
BREAKING: ಇಸ್ರೋದ ಮೊದಲ ಸೂರ್ಯ ಮಿಷನ್ ಯಶಸ್ವಿ: ಅಂತಿಮ ಕಕ್ಷೆಗೆ ಆದಿತ್ಯ ಎಲ್1 ಸೇರ್ಪಡೆ | Aditya L-1