ನವದೆಹಲಿ:ಕೇಂದ್ರ ಗೃಹ ಕಾರ್ಯದರ್ಶಿ ಜೊತೆ ಸಭೆ ನಂತರ ದೇಶಾದ್ಯಂತ ಟ್ರಕ್ ಚಾಲಕರು ಕರೆ ನೀಡಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ಮುಷ್ಕರ ವಾಪಸ್ ಪಡೆದಿದ್ದು, ಸರಕು ಸಾಗಣೆ ವಾಹನಗಳ ಚಾಲಕರು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಕೇಂದ್ರದ ಹೊಸ ಕಾನೂನು ವಿರೋಧಿಸಿ ಲಾರಿ ಚಾಲಕರು ಮುಷ್ಕರ ಹೂಡಿದ್ದರು.ಇದರಿಂದ ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಡಿಸೇಲ್ ಪೆಟ್ರೋಲ್ ಸಾಗಣೆ ಕಷ್ಟವಾಗಿತ್ತು.
ಸಭೆ ನಂತರ ಮಾತನಾಡಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, “ನಾವು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಹೊಸ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದೇವೆ. ಭಾರತೀಯ ನ್ಯಾಯ ಸಂಹಿತಾ 106/2 ಅನ್ನು ಜಾರಿಗೊಳಿಸುವ ಮೊದಲು ನಾವು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.