ನವದೆಹಲಿ : 2023ರಲ್ಲಿ ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಬೀದಿ ಬದಿ ವ್ಯಾಪಾರಿಗಳಿಗೆ 5,000 ರೂ.ವರೆಗಿನ ಕಿರು ಸಾಲ ಸೌಲಭ್ಯವನ್ನ ಒದಗಿಸಲು ಸರ್ಕಾರವು ವಿಶೇಷ ಒತ್ತು ನೀಡಲಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಇದೇ ವೇಳೆ ಯೋಜನೆಯ ವಿಸ್ತರಣೆಯ ಸಿಹಿ ಸುದ್ದಿ ನೀಡಿದರು.
ಡಿಜಿಟಲ್ ಇಂಡಿಯಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಶ್ವಿನಿ ವೈಷ್ಣವ್ ಮಾತನಾಡಿ, ‘2023ರಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 3 ಸಾವಿರದಿಂದ 5 ಸಾವಿರ ರೂ.ವರೆಗಿನ ಕಿರುಸಾಲದ ಅಗತ್ಯತೆಗಳನ್ನ ಪೂರೈಸಲು ಸರಳ ರೀತಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಲು ವಿಶೇಷ ಗಮನ ನೀಡಲಾಗುವುದು.
ಕಳೆದ ತಿಂಗಳು ಡಿಸೆಂಬರ್ನಲ್ಲಿಯೇ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯನ್ನ ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ. ಮೊದಲು ಅದರ ಕೊನೆಯ ದಿನಾಂಕ 31 ಮಾರ್ಚ್ 2023 ರವರೆಗೆ ಇತ್ತು. ಈ ಯೋಜನೆಯಡಿ ಸಣ್ಣ ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತದೆ. ಈ ಬಗ್ಗೆ ಹಣಕಾಸು ಸಚಿವಾಲಯ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
ಸ್ವಾನಿಧಿ ಯೋಜನೆಯ ಬಗ್ಗೆ ತಿಳಿಯಿರಿ
ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಸ್ವಾವಲಂಬಿ ನಿಧಿ (SVANidhi) ಯೋಜನೆಯನ್ನ ಜೂನ್ 2020ರಲ್ಲಿ ಮೈಕ್ರೋ ಲೋನ್ ಸೌಲಭ್ಯವಾಗಿ ಪ್ರಾರಂಭಿಸಲಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗುವ ನಷ್ಟವನ್ನ ಸರಿದೂಗಿಸಲು ಬೀದಿ ವ್ಯಾಪಾರಿಗಳಿಗೆ ಅಧಿಕಾರ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇನ್ನು PM ಸ್ವಾನಿಧಿ ಯೋಜನೆಯ ಕೊನೆಯ ದಿನಾಂಕವನ್ನು 2024 ರವರೆಗೆ ವಿಸ್ತರಿಸಲಾಗಿದೆ.