ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಹೊಸೂರು ಗ್ರಾಮದಲ್ಲಿ ತಂದೆ ಮಾಡಿದ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಮಗನಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಾಲ ಮರು ಪಾವತಿ ಮಾಡದಿರುವುದರಿಂದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನುಷ ಘಟನೆ ನಡೆದಿದೆ.
14 ವರ್ಷದ ಬಾಲಕನಿಗೆ ದೊಡ್ಡ ಬಸಪ್ಪ ಮಡಿವಾಳರ ಥಳಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಇದರಿಂದ ಥಳಿತಕ್ಕೆ ಒಳಗಾದ ಬಾಲಕನ ತಾಯಿ ಮಂಜುಳಾ ಡಿ.31 ರಂದು ಎಸ್ಪಿಗೆ ದೂರು ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.ತಂದೆ ಮರಿಯಪ್ಪ ಮಡಿವಾಳರ ಮಾಡಿದ ಸಾಲ ತೀರಿಸಿಲ್ಲ ಎಂದು ಸಾಲ ಕೊಟ್ಟವರು ನನ್ನ ಮಗನಿಗೆ ಥಳಿಸಿದ್ದಾರೆ.
ಇದೀಗ ಈ ಬಗ್ಗೆ ಕನಕರಾಯ ಮಡಿವಾಳರ, ರಾಜೇಶ್ವರಿ ಮಡಿವಾಳರ, ವೀರಭದ್ರಪ್ಪ ಮಡಿವಾಳರ, ಗಂಗಮ್ಮ ಮಡಿವಾಳರ, ನಿರುಪಾದೆಪ್ಪ ಮಡಿವಾಳರ, ಬಸವರಾಜ ಮಡಿವಾಳರ ಎನ್ನುವವರ ವಿರುದ್ಧ ಬಾಲಕನ ತಾಯಿ ಮಂಜುಳಾ ದೂರು ನೀಡಿದ್ದಾರೆ.ಮರಿಯಪ್ಪ ಮಡಿವಾಳರ ಎಂಬಾತ 40 ಸಾವಿರ ರೂಪಾಯಿ ಸಾಲ ಪಡೆದಿದ್ದನಂತೆ. ನಂತರ 30 ಸಾವಿರ ಸಾಲ ತೀರಿಸಿದ್ದು, ಇನ್ನು 10 ಸಾವಿರ ರೂ. ಬಾಕಿ ಇದ್ದು, ಸಕಾಲಕ್ಕೆ ತೀರಿಸಿಲ್ಲ ಎಂದು ಸಾಲಕೊಟ್ಟವರು ಮಗನನ್ನು ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.