ರಾಮನಗರ :- ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅಥವಾ ರಾಷ್ಟ್ರಪತಿ ಮುರ್ಮು ಅವರು ಈ ಹೆದ್ದಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯ ವೈಮಾನಿಕ ಸಮೀಕ್ಷೆ ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ಎರಡೂ ನಗರಗಳ ಮಧ್ಯೆ ಪ್ರಯಾಣದ ಅವಧಿಯನ್ನು 1.20 ಗಂಟೆಗೆ ಇಳಿಕೆಯಾಗಲಿದೆ. ಜತೆಗೆ, ಈ ಬಿಜಿಯೆಸ್ಟ್ ಹೆದ್ದಾರಿಯಾಗಿರುವುದರಿಂದ ಆರ್ಥಿಕ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ನೆರವು ನೀಡಲಿದೆ ಎಂದರು.
ಈ ದಶಪಥ ಹೆದ್ದಾರಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ಒಂದಷ್ಟು ಸಲಹೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು. ಹೆದ್ದಾರಿ ಪೂರ್ಣಗೊಂಡರೆ 90 ನಿಮಿಷಗಳಲ್ಲಿ ಬೆಂಗಳೂರು – ಮೈಸೂರು ನಡುವೆ ಸಂಚಾರ ಮಾಡಬಹುದು. ಹೆದ್ದಾರಿಯಿಂದ ಮೈಸೂರು, ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ. ನಾವು ಸಾಮೂಹಿಕ ಸಾರಿಗೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ದಶಪಥದಿಂದ ರಾಮನಗರ ಹಾಗೂ ಮಂಡ್ಯ ಜಿಲ್ಲೆಗೆ ಕನೆಕ್ಟಿವಿಟಿ ಸುಗಮ ಆಗಲಿದೆ. ಈ ಪ್ರದೇಶದಲ್ಲಿ ಕೈಗಾರಿಕಾ ಪಟ್ಟಣಗಳ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಇದರಿಂದ ಐಟಿ ಉದ್ಯಮಕ್ಕೆ ನೆರವು ದೊರೆಯಲಿದೆ ಎಂದು ಅವರು ಹೇಳಿದರು.
ಎಕ್ಸ್ಪ್ರೆಸ್ ವೇ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಮೈಸೂರು ಭಾಗದಲ್ಲಿ ಮಾತ್ರ ಅಲ್ಲಲ್ಲಿ ಸ್ವಲ್ಪ ಪೆಂಡಿಂಗ್ ಇದೆ. ಫೆಬ್ರವರಿ 23ರೊಳಗೆ ಪೆಂಡಿಂಗ್ ಇರುವ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಹೆದ್ದಾರಿಯು 52 ಕಡೆ ಗ್ರೀನ್ ಅಲೈನ್ಮೆಂಟ್ ಹೊಂದಿದೆ. ಕೆಲವು ಕಡೆ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇದೆ. ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಬಳಿ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನೇಕಾರಿಕೆ, ಗುಡಿ ಕೈಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಸ್ಥಳವನ್ನು ಮೀಸಲು ಇಟ್ಟಿದ್ದೇವೆ. ಜತೆಗೆ, ಕರ್ನಾಟಕದ ಹೆಚ್ಚುಗಾರಿಕೆಯ ಯಾವುದೇ ಉತ್ಪನ್ನಗಳ ಮಾರಾಟಕ್ಕೂ ಜಾಗ ಕಲ್ಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.
ಮಂಡ್ಯ – ರಾಮನಗರ ಕನೆಕ್ಟಿವಿಟಿ ಹೆಚ್ಚಾಗಲಿದೆ. ಜತೆಗೆ, ಬೆಂಗಳೂರಿನ ಮೇಲಿನ ಟ್ರಾಫಿಕ್ ಒತ್ತಡ ಕೂಡ ಕಡಿಮೆಯಾಗಲಿದೆ. ಈ ಎರಡೂ ನಗರಗಳ ಮಧ್ಯೆ ಕೈಗಾರಿಕೆಗಳು, ಐಟಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಈ ಹೆದ್ದಾರಿ ಕಾರಣವಾಗಲಿದೆ. ಇದು ಕರ್ನಾಟಕದ ಅಭಿವೃದ್ಧಿಯ ಎಂಜಿನ್ ಆಗಿ ರೂಪಗೊಳ್ಳಲಿದೆ ಎಂದು ಗಡ್ಕರಿ ಅವರು ಹೇಳಿದರು.
ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ಕಾಮಗಾರಿ ಶುರುವಾಗಿದೆ. ಈ ರಸ್ತೆ ಅಭಿವೃದ್ಧಿಯಿಂದ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ. ಕರ್ನಾಟಕದಲ್ಲಿ 288 ಕಿ.ಮೀ ಮತ್ತು ತಮಿಳುನಾಡಿನಲ್ಲಿ 45 ಕಿ.ಮೀ ರಸ್ತೆ ಇರಲಿದೆ. ಇದಕ್ಕಾಗಿ 7 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ಸ್ಯಾಟಲೈಟ್ ರಿಂಗ್ ರೋಡ್, ಬೆಂಗಳೂರು, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ, ಆನೇಕಲ್, ಹೊಸೊರು ಸಂಪರ್ಕಿಸಲಿದೆ ಎಂದು ತಿಳಿಸಿದರು.
ದಶಪಥ ಹೆದ್ದಾರಿಯಲ್ಲಿ ಟೋಲ್ ಕಟ್ಟಲೇಬೇಕು. ಉತ್ತಮ ರಸ್ತೆ, ಉತ್ತಮ ಸೌಲಭ್ಯ ಬೇಕು ಎಂದಾದರೆ ಟೋಲ್ ಕಟ್ಟಲೇಬೇಕು. ಈ ಮೊದಲು ಬೆಂಗಳೂರಿಂದ ಮೈಸೂರಿಗೆ ತೆರಳಲು ಎಷ್ಟು ಸಮಯ ಬೇಕಾಗುತ್ತಿತ್ತು, ಎಷ್ಟು ಇಂಧನ ವೆಚ್ಚವಾಗುತ್ತಿತ್ತು ಎಂಬುದನ್ನು ಲೆಕ್ಕ ಹಾಕಿ. ಮತ್ತು ಈಗ ಈ ದಶಪಥವಾದ ಮೇಲೆ ಎಷ್ಟು ಉಳಿತಾಯವಾಗುತ್ತದೆ ಎಂಬುದನ್ನು ಪರಿಗಣಿಸಿ. ಹಾಗಾಗಿ, ಟೋಲ್ ಕಟ್ಟುವುದು ಅನಿವಾರ್ಯ. ಯಾರಿಗೂ ಉಚಿತ ಪ್ರವೇಶವಿಲ್ಲ ಎಂದರು.
ವರದಿ : ಗಿರೀಶ್ ರಾಜ್, ಮಂಡ್ಯ
BJP ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಹುಮತ ಸಾಧಿಸಲಿದ್ದೇವೆ – ಜೆ.ಪಿ.ನಡ್ಡಾ
BREAKING NEWS: ಕೊಪ್ಪಳದಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ