ತುಮಕೂರು: ಇಂದು ತುರುವೆಕೆರೆಯಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ಧಾಳಿ ನಡೆಸಿದರು.
ತುಮಕೂರಿನ ಈ ಕಾಂಗ್ರೆಸ್ ಸಮಾವೇಶದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಇಡೀ ರಾಜ್ಯ ಹಾಗೂ ದೇಶಕ್ಕೆ ಒಂದು ಸಂದೇಶ ರವಾನಿಸಲಾಗುತ್ತಿದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೊಸ ಆಶಾಕಿರಣ ಮೂಡುತ್ತಿದ್ದು, ಕಾಂಗ್ರೆಸ್ ಬೆಳಕು ಹರಿಯುತ್ತಿದ್ದು, ಬಿಜೆಪಿ ಸರ್ಕಾರ ಮುಳುಗುತ್ತಿದೆ ಎಂದರು.
ಕಾಂತರಾಜ್ ಅವರು ಜೆಡಿಎಸ್ ನಿಂದ ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಸೇರಿದ್ದಾರೆ. ಇಲ್ಲಿ ಸಾಕಷ್ಟು ಮಂದಿ ಕಾಂಗ್ರೆಸ್ ನಾಯಕರು ಕಷ್ಟದ ಸಮಯದಲ್ಲಿ ಪಕ್ಷದ ಪರ ನಿಂತಿದ್ದಾರೆ. ಇಲ್ಲಿ ಬೇರೆಯವರಿಗೆ ಶಕ್ತಿ ಇಲ್ಲ ಎಂದು ಹೇಳುವುದಿಲ್ಲ. ಎಲ್ಲರೂ ಶಕ್ತಿವಂತರು. ಆದರೆ ರಾಜಕಾರಣದಲ್ಲಿ 49 ಶೂನ್ಯವಾದರೆ, 51 ನೂರಕ್ಕೆ ಸಮನಾಗುತ್ತದೆ. ಹಿಂದೆ ರುದ್ರಪ್ಪನವರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದ್ದಿರಿ. ನಂತರ ಜಗ್ಗೇಶ್ ಅವರನ್ನು ಗೆಲ್ಲಿಸಿದ್ದಿರಿ. ಆಪರೇಷನ್ ಕಮಲದಿಂದ ಜಗ್ಗೇಶ್ ಹೋಗಿದ್ದಾರೆ. ನಂತರ ಇಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಬಿಜೆಪಿ ಹಾಗೂ ದಳದವರು ಗೆದ್ದಿದ್ದಾರೆ.
ಇಂದು ಇಲ್ಲಿ ಮಧು ಬಂಗಾರಪ್ಪನವರು ಇದ್ದಾರೆ. ಕಳೆದ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರು ಜೆಡಿಎಸ್ ನಿಂದ ನಿಂತಿದ್ದರು. ಎಂಎಲ್ಸಿಯಾಗಿ ಕಾಂತರಾಜ್ ಅವರು ಇದ್ದರು. ನಾನು ಇಂದು ತುಮಕೂರಿನ ಮಹಾಜನತೆಗೆ ಒಂದು ವಿಚಾರ ಕೇಳಲು ಬಯಸುತ್ತೇನೆ. ಕಾಂತರಾಜ್ ಅವರು ರಾಜಕೀಯವಾಗಿ ದಡ್ಡರೇ? ಕಾಂತರಾಜ್ ಅವರಿಗೆ ರಾಜಕೀಯ ಪ್ರಜ್ಞೆ ಇದೆ ಅಲ್ಲವೇ? ವಾಸು, ಮಧು ಬಂಗಾರಪ್ಪನವರಿಗೂ ರಾಜಕೀಯ ಪ್ರಜ್ಞೆ ಇದೆ ಅಲ್ಲವೇ? ಕೋಲಾರದ ಮನೋಹರ್, ಕೋನರೆಡ್ಡಿ, ತೀರ್ಥಹಳ್ಳಿ ಮಂಜುನಾಥ್ ಗೌಡರು, ರಮೇಶ್, ಜೀವಿಜಯ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇತ್ತೀಚೆಗೆ ದತ್ತಾ ಅವರು ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಇವರೆಲ್ಲರೂ ರಾಜಕೀಯ ಅನುಭವ ಇರುವವರು.
ಭವಿಷ್ಯದಲ್ಲಿ ರಾಜಕೀಯ ಬೆಳಕು ಎಲ್ಲಿದೆ ಎಂದು ಅರ್ಥ ಮಾಡಿಕೊಳ್ಳುವ ನಾಯಕರು ಇವರಾಗಿದ್ದು, ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ನಮ್ಮ ಕೈ ಬಲಪಡಿಸುತ್ತಿದ್ದಾರೆ. ನೀವು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದೀರಿ. ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ಅವಧಿಯಲ್ಲಿ ಸರ್ಕಾರ ಬಡವರಿಗಾಗಿ ಯಾವುದಾದರೂ ಒಂದು ಯೋಜನೆ ನೀಡಿದೆಯೇ? ತಿಪಟೂರಿನ ಯೋಗೇಶ್ ಅವರು ಕೂಡ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಸಾಧನೆ ಎಂದರೆ ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿ ರಾಜ್ಯಪಾಲರ ಬಳಿ ಕಳಿಸಿ ರಾಜೀನಾಮೆ ಕೊಡಿಸಿದ್ದು. ಬಿಜೆಪಿ ರಾಜ್ಯದಲ್ಲಿ ಉತ್ತಮ ಆಡಳಿತ ಕೊಟ್ಟಿದ್ದರೆ ಯಡಿಯೂರಪ್ಪನವರಿಂದ ರಾಜೀನಾಮೆ ಯಾಕೆ ಕೊಡಿಸುತ್ತಿದ್ದರು.
ನಮ್ಮ ಪಕ್ಷದ ವತಿಯಿಂದ ನಾವು ಸಮೀಕ್ಷೆ ಮಾಡಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ 136, ಬಿಜೆಪಿಗೆ 60 ಕ್ಷೇತ್ರಗಳು ಬರುತ್ತದೆ ಎಂದು ಸಮೀಕ್ಷೆ ವರದಿ ಬಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ನಾನು ಮನವಿ ಮಾಡಿಕೊಳ್ಳುವುದು, ಸುಮ್ಮನೆ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಇಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆ ಇಲ್ಲ. ಎಲ್ಲರನ್ನು ಗೌರವದಿಂದ ಕಾಣುತ್ತೇವೆ. ಬಿಜೆಪಿ ಅಧಿಕಾರವನ್ನು ನೀವು ನೋಡಿದ್ದೀರಿ. ಜನತ ಸರ್ಕಾರ ಹಾಗೂ ಕಾಂಗ್ರೆಸ್ ಸರ್ಕಾರವನ್ನು ನೋಡಿದ್ದೀರಿ.
ಬಿಜೆಪಿಯವರು ಕೇವಲ ಭಾವನೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ. ಮೊನ್ನೆ ನಳೀನ್ ಕುಮಾರ್ ಕಟೀಲ್ ಅವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಡಿ, ಲವ್ ಜಿಹಾದ್, ಧರ್ಮದ ಬಗ್ಗೆ ಚರ್ಚೆ ಮಾಡಿ ಎಂದಿದ್ದಾರೆ. ನಿಮ್ಮ ಭೂಮಿಯಲ್ಲಿ ಕೆರೆಗಳು ತುಂಬಬೇಕು, ಪಕ್ಕದ ಹೋಬಳಿ ಗಳಲ್ಲಿ ಅಂತರ್ಜಲ ಹೆಚ್ಚಬೇಕು. ಹೇಮಾವತಿ ನೀರು ಬರಬೇಕು. ಇದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಇದು ನಮ್ಮ ಸಂಕಲ್ಪ.
ಸಿದ್ದರಾಮಯ್ಯ ಅವರ ಕಾಲದಲ್ಲಿ ಲಕ್ಷಾಂತರ ಎಕರೆ ನೀರಾವರಿ ಮಾಡಿದ್ದೇವೆ. ಎಲ್ಲೂ ವಿದ್ಯುತ್ ಶಕ್ತಿ ಕಟ್ ಮಾಡಿಲ್ಲ. ನಿಮ್ಮ ಜಿಲ್ಲೆಯಲ್ಲಿ 2400 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ವಿಶ್ವದ ಅತಿದೊಡ್ಡ ಕೇಂದ್ರ ಸ್ಥಾಪಿಸಿದ್ದೇವೆ. ಪಾವಗಡದಲ್ಲಿನ ಸೋಲಾರ್ ಪಾರ್ಕ್ ಗೆ ನಿಮ್ಮ ಕಣ್ಣುಗಳೇ ಸಾಕ್ಷಿ.
ಉತ್ತಮ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಬಿಜೆಪಿ ಸರಕಾರದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ ಇಂತಹ ಭ್ರಷ್ಟ ಸರ್ಕಾರ ಇಲ್ಲ. ಇವರು ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಕರ್ನಾಟಕ ರಾಜ್ಯದ ಆಡಳಿತ ಎಂದರೆ ದೇಶಕ್ಕೆ ಮಾದರಿಯಾಗಿತ್ತು. ಆದರೆ ಇಂದು ಅದನ್ನು ನಾಶ ಮಾಡಿದ್ದಾರೆ. ಬಿಜೆಪಿ ಸಮಾಜವನ್ನು ಒಡೆಯುತ್ತಿದೆ. ಕಬ್ಬಿಣವನ್ನು ನಾವು ಎರಡು ರೀತಿಯಲ್ಲಿ ಬಳಸಬಹುದು. ಒಂದು ಕತ್ತರಿಗೆ ಹಾಗೂ ಮತ್ತೊಂದು ಸೂಜಿಗೆ. ಬಿಜೆಪಿ ಕತ್ತರಿಯಂತೆ ಭಾವನಾತ್ಮಕ ವಿಚಾರದಿಂದ ಸಮಾಜವನ್ನು ಕತ್ತರಿಸುತ್ತಿದ್ದರೆ, ಕಾಂಗ್ರೆಸ್ ಸೂಜಿಯಂತೆ ಸಮಾಜವನ್ನು ಒಂದುಗೂಡಿಸುತ್ತಿದೆ. ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾಲ ನಿಮ್ಮ ಜಿಲ್ಲೆಯಲ್ಲಿ ಪಾದಯಾತ್ರೆ ಮಾಡಿದಾಗ ನೀವು ಭವ್ಯ ಸ್ವಾಗತ ನೀಡಿ ಶಕ್ತಿ ತುಂಬಿದ್ದಿರಿ.
ಕಾಂಗ್ರೆಸ್ ಪಕ್ಷ ಕಳೆದ ಬಾರಿ ಇಲ್ಲಿ ಸೋತಿದೆ. ಸೋಲಿನಲ್ಲಿ ಈಗ ಗೆಲುವನ್ನು ಹುಡುಕಬೇಕಿದೆ. ಇಂದು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಬಿಜೆಪಿ ಹೇಳಿತ್ತು. ಆದರೆ ಅದು ಅವರಿಂದ ಸಾಧ್ಯವಾಗಿಲ್ಲ. ಕೋವಿಡ್ ಸಮಯದಲ್ಲಿ ರೈತರನ್ನು, ಕಾರ್ಮಿಕರನ್ನು ಕೈಬಿಟ್ಟರು. ಬಿಜೆಪಿ ನುಡಿದಂತೆ ನಡೆಯಲು ಆಗಲಿಲ್ಲ. ಇಂತಹ ಬಿಜೆಪಿ ಸರ್ಕಾರಕ್ಕೆ ನೀವು ಅಂತ್ಯವಾಡಬೇಕು.
ಕಾಂಗ್ರೆಸ್ ಪಕ್ಷಕ್ಕೆ ಒಂದು ಇತಿಹಾಸವಿದೆ. ಕಾಂಗ್ರೆಸ್ ಇತಿಹಾಸ ದಾಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲ ವರ್ಗಗಳು ಅಧಿಕಾರಕ್ಕೆ ಬಂದಂತೆ. ರಾಜ್ಯದ ಅನೇಕ ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ಹಾಲು ಉತ್ಪಾದಕರಿಂದ, ಯುವಕರು, ಮಹಿಳೆಯರು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಬಿಜೆಪಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ನಿಮ್ಮ ಖಾತೆಗೆ 15 ಲಕ್ಷ ಹಣ ಬರಲಿಲ್ಲ, ನಿಮ್ಮ ಆದಾಯ ಡಬಲ್ ಮಾಡಲಿಲ್ಲ. 400 ರೂ. ಇದ್ದ ಅಡುಗೆ ಅನಿಲದ ಬೆಲೆ 1100 ಆಗಿದೆ. 60 ರೂ ಇದ್ದ ಪೆಟ್ರೋಲ್ 110 ಆಗಿದೆ. ಸೀಮೆಂಟ್, ಕಬ್ಬಿಣ, ಗೊಬ್ಬರ ಎಲ್ಲವೂ ಹೆಚ್ಚಾಗಿದೆ. ಮತ್ತೆ ರಾಜ್ಯದಲ್ಲಿ ಬದಲಾವಣೆ ತರಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು.
ಇನ್ನು ಕೊಬ್ಬರಿಗೆ ಮತ್ತೆ ಬೆಲೆ ಬರಬೇಕು. ಈ ಭಾಗದ ಮುಖ್ಯ ಬೆಳೆ ತೆಂಗು. ರೈತರಿಗೆ ಸಂಬಳ, ಬಡ್ತಿ, ನಿವೃತ್ತಿ, ಲಂಚ ಯಾವೂದು ಇಲ್ಲ. ಹೀಗಾಗಿ ರೈತರ ರಕ್ಷಣೆ ನಾವು ಮಾಡುತ್ತೇವೆ. ತೆಂಗು, ಅಡಿಕೆ, ರಾಗಿ ಬೆಳೆಗಾರರ ರಕ್ಷಣೆ ಮಾಡಲು, ಯುವಕರಿಗೆ ಉದ್ಯೋಗ ನೀಡಲು ನಾವು ಬದ್ಧರಾಗಿದ್ದೇವೆ. ಇನ್ನು ಸರ್ಕಾರಿ ನೌಕರರು ಹಳೆ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸುತ್ತಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ರಾಜಸ್ಥಾನದಲ್ಲಿ, ಹಿಮಾಚಲ ಪ್ರದೇಶದಲ್ಲಿ ಈ ವಿಚಾರವಾಗಿ ತೀರ್ಮಾನ ಮಾಡಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಚರ್ಚೆ ಮಾಡಿ ತೀರ್ಮಾನ ಘೋಷಣೆ ಮಾಡುತ್ತೇವೆ. ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ, ನಮಗೆ ಶಕ್ತಿ ನೀಡಿ. ನಾವು ನಿಮ್ಮ ಸೇವೆ ಮಾಡುತ್ತೇವೆ ಎಂದರು.
‘ನಮ್ಮ ಮೆಟ್ರೋ ಪ್ರಯಾಣಿ’ಕರಿಗೆ ಗುಡ್ ನ್ಯೂಸ್: ಈ ನಿಲ್ದಾಣಗಳಲ್ಲಿ ‘ಆಟೋ ರಿಕ್ಷಾ ಕೌಂಟರ್’ ಓಪನ್
2022ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ: ನವಜಾತ ಶಿಶುಗಳ ಮರಣ ದರ ಇಳಿಕೆ, ಲಿಂಗಾನುಪಾತ ಹೆಚ್ಚಳ
Good News : ವಿಜ್ಞಾನಿಗಳ ಅದ್ಭುತ ಅವಿಷ್ಕಾರ ; ಭವಿಷ್ಯದಲ್ಲಿ ‘ಹೃದಯಾಘಾತ’ದಿಂದ ಸಾವು ಸಂಭವಿಸೋಲ್ಲ