ಚಿಕ್ಕಬಳ್ಳಾಪುರ: ಕಾನೂನು ಪಾಲನೆ, ಸಂಚಾರ ನಿಯಂತ್ರಣ ಕ್ರಮವಷ್ಟೇ ಅಲ್ಲದೇ ನಾಟಕದ ಮೂಲಕವೂ ಪೊಲೀಸ್ ಇಲಾಖೆ ಜನಸ್ನೇಹಿಯೆಂದು ಗೌರಿಬಿದನೂರು ವೃತ್ತದ ಪೊಲೀಸರು ಮಾಡಿ ತೋರಿಸಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಪೊಲೀಸರು ಕಾನೂನು ಪಾಲನೆಯ ಜೊತೆಗೆ, ನಾಟಕವನ್ನು ಆಡಿ ಜನತೆಯನ್ನು ರಂಜಿಸುವ ಮೂಲಕ ಕಾನೂನು ಅರಿವನ್ನು ಮೂಡಿಸಿದ್ದಾರೆ.
ಗೌರಿಬಿದನೂರು ವೃತ್ತದ ಸಿಪಿಐ ಕೆ.ಪಿ ಸತ್ಯನಾರಾಯಣ ಹರಿಯಬ್ಬೆ ಅವರನ್ನು ವಿಶ್ವಮಾನ ದಿನಾಚರಣೆಯ ಪ್ರಯುಕ್ತ ವಿಶೇಷ ಆಹ್ವಾನಿತರಾಗಿ ಕರೆಯೋದಕ್ಕೆ ಸಹ ನಿರ್ದೇಶನಕಾರ ಕೆ.ವಿ ನಾಯಕ್ ಆಗಮಿಸಿದಂತ ವೇಳೆಯಲ್ಲಿ ನಾಟಕದ ಕುರಿತಂತೆ ಕೆಲ ಕಾಲ ಚರ್ಚೆ ನಡೆದಿದೆ. ಆಗ ತಾವು ಕಾಲೇಜು ದಿನಗಳಲ್ಲಿ ರೂಪಕಗಳನ್ನು ರಚಿಸಿ, ನಟಿಸಿ, ನಿರ್ದೇಶಿಸಿದ ಬಗ್ಗೆ ಕೆ.ಪಿ ಸತ್ಯನಾರಾಯಣ ಹೇಳಿದ್ದಾರೆ. ಇದರಿಂದ ಪ್ರೇರಣೆಗೊಂಡಂತ ಕೆ.ವಿ ನಾಯಕ್, ನೀವು ಯಾಕೆ ನಾಟಕದಲ್ಲಿ ನಟಿಸಬಾರದು? ನೀವು ದುರ್ಯೋಧನ, ಭೀಮನ ಪಾತ್ರಕ್ಕೆ ಹೇಳಿಮಾಡಿಸಿದಂತೆ ಇದ್ದೀರಿ ಎಂಬುದಾಗಿ ತಿಳಿಸಿದ್ದಾರೆ.
ಕೆ.ವಿ ನಾಯಕ್ ಅವರ ಮಾತಿನಿಂದ ಪ್ರೇರಣೆಗೊಂಡಂತ ಸಿಪಿಐ ಕೆ.ಪಿ ಸತ್ಯನಾರಾಯಣ, ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ನಾಟಕ ಮಾಡೋದಕ್ಕೆ ನಿರ್ಧರಿಸುತ್ತಾರೆ. ಅದರಂತೆ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂ ಆಧಾರಿತ ಕೌರವ ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಿನಾಸಂನ ಬಾನುಪ್ರಕಾಶ್ ಅವರ ನಿರ್ದೇಶನದೊಂದಿಗೆ ಕೇವಲ 7 ದಿನಗಳಲ್ಲಿ ಪ್ರಾಕ್ಟೀಸ್ ಆರಂಭಿಸಿದಂತ ಪೊಲೀಸ್ ಸಿಬ್ಬಂದಿಗಳು, ದಿನವೊಂದಕ್ಕೆ ರಾತ್ರಿ 8 ಗಂಟೆಯ ನಂತ್ರ ಒಂದು ಗಂಟೆ ಪ್ರಾಕ್ಟೀಸ್ ಮಾಡಿದ್ದಾರೆ. ಅಂತಿಮವಾಗಿ ಡಿಸೆಂಬರ್ 29ರ ಸಂಜೆ 7 ಗಂಟೆಗೆ ಗೌರಿಬಿದನೂರಿನ ಹೆಚ್.ಎನ್ ರಂಗಮಂದಿರದಲ್ಲಿ ಕೌರವ ನಾಟಕವನ್ನು ಪ್ರದರ್ಶಿಸಿದ್ದಾರೆ.
ಕೌರವ ನಾಟಕದ ಮುಖ್ಯಪಾತ್ರದಲ್ಲಿ ಸಿಪಿಐ ಕೆ.ಪಿ ಸತ್ಯನಾರಾಯಣ ಕಾಣಿಸಿಕೊಂಡರೇ, ಇನ್ನುಳಿ ಪಾತ್ರಗಳಲ್ಲಿ ಗೌರಿಬಿದನೂರು ವೃತ್ತದ ನಗರ, ಗ್ರಾಮಾಂತರ ಹಾಗೂ ಮಂಚನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾಣಿಸಿಕೊಂಡಿದ್ದಾರೆ. ಪೊಲೀಸರೇ ನಾಟಕವನ್ನು ಆಡುವಂತ ವಿಷಯ ತಿಳಿದಂತ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ನ್ಯಾಯಾಧೀಶರಾದಂತ ಮಂಜುನಾಥಾಚಾರಿ ಖುದ್ದು ಹಾಜರಾಗಿ ನೋಡಿದ್ದಾರೆ. ಅಲ್ಲದೇ ಪೊಲೀಸರೇ ಆಡಿದಂತ ನಾಟಕವನ್ನು ಕಂಡು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ಈ ನಾಟಕದ ಬಗ್ಗೆ ಕನ್ನಡ ನ್ಯೂಸ್ ನೌ ಗೌರಿಬಿದನೂರು ಸಿಪಿಐ ಕೆ.ಪಿ ಸತ್ಯನಾರಾಯಣ ಮಾತನಾಡಿಸಿದಾಗ, ಪೊಲೀಸರು ಕಾನೂನು ಅರಿವಿನ ಮೂಲಕ, ಸಾರ್ವಜನಿಕರನ್ನು ನಮ್ಮ ಕೆಲಸದಲ್ಲಿ ತೊಡಗಿಸಿಕೊಂಡಾಗ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಜನಸ್ನೇಹಿಯಾಗಿದ್ದರೇ, ದೈನಂದಿನ ಕರ್ತವ್ಯ ನಿರ್ವಹಿಸೋದಕ್ಕೆ ಪ್ರೇರಣೆ ಎಂಬ ಉದ್ದೇಶದೊಂದಿಗೆ ಇಂತದ್ದೊಂದು ಪ್ರಯತ್ನ ನಡೆಸಲಾಯಿತು ಎಂದರು.
ನಮ್ಮ ನಾಟಕವನ್ನು ಖುದ್ದು ಹಾಜರಾಗಿ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ್ ವೀಕ್ಷಿಸಿದ್ದಾರೆ. ಈ ನಾಟಕಕ್ಕೆ ಕುವೆಂಪು, ತೇಜಸ್ವಿ ಬಳಗದ ಸಂಚಾಲಕ ಹಾಗೂ ವಕೀಲರಾದಂತ ಜಿ.ಟಿ ನರೇಂದ್ರ ಕುಮಾರ್, ತುಮಕೂರಿನ ಮಾನಸ ಮಂದಿರದ ಅಧ್ಯಕ್ಷ ಹೊನ್ನಪ್ಪ ಮತ್ತು ಬಳಗದ ಎಲ್ಲಾ ಸದಸ್ಯರು ಆಗಮಿಸಿ ನೋಡಿದ್ದಾರೆ. ನಮ್ಮ ನಾಟಕ ನೋಡಿದಂತ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಅಂದಹಾಗೇ ಯೂಟ್ಯೂಬ್ ನಲ್ಲಿ ಪೊಲೀಸರ ನಟನೆಯ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರಂನ ಕೌರವ ನಾಟಕ ವೈರಲ್ ಆಗಿದೆ. ವೀಕ್ಷಿಸಿದಂತ ವೀಕ್ಷಕರು, ಭಾರೀ ಮೆಚ್ಚುಗೆ, ಪ್ರಶಂಸೆಯನ್ನು ವ್ಯಕ್ತ ಪಡಸುತ್ತಿದ್ದಾರೆ. ಅಲ್ಲದೇ ಇತರರಿಗೆ ಮಾದರಿಯಾದಂತ ಪೊಲೀಸರ ನಡೆಯ ಬಗ್ಗೆ ಅಭಿನಂದನೆ ಹೇಳಿದ್ದಾರೆ. ಹಾಗಾದ್ರೇ ನೀವು ನಾಟಕ ನೋಡಬೇಕು ಅಂದರೇ, ವೀಡಿಯೋ ಲಿಂಕ್ ಕೆಳಗಿದೆ. ವೀಕ್ಷಿಸೋದು ಮರೆಯಬೇಡಿ.
ವರದಿ: ವಸಂತ ಬಿ ಈಶ್ವರಗೆರೆ