ಬೆಂಗಳೂರು: ಇಡೀ ರಾಜ್ಯದಲ್ಲಿ ಎದ್ದಿರುವ ಬಿಜೆಪಿ ಪರ ಅಲೆಯನ್ನು ನೋಡಿ ವಿಚಲಿತರಾದ ಕಾಂಗ್ರೆಸ್ಸಿಗರು ಕೀಳು ಅಭಿರುಚಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೇ ಅಧಿಕಾರಕ್ಕೆ ಬರ್ತೀವಿ ಅಂತ ಹೇಳ್ತಿದ್ದೀರಾ. ಇದು ಸುಲಭವಲ್ಲ. ನೀವು 50ರಿಂದ 60 ಸೀಟು ಪಡೆಯುವುದು ಬಹಳ ಕಷ್ಟ. ನಾವು 140 ಸೀಟು ಗೆದ್ದು ಅಧಿಕಾರ ಮಾಡಲಿದ್ದೇವೆ ಎಂದು ಸವಾಲು ಹಾಕಿದರು.
ಇತ್ತೀಚೆಗೆ ಕಾಂಗ್ರೆಸ್ ಮುಖಂಡರು, ಬಿಜೆಪಿ ಮುಖಂಡರನ್ನು ಗುರಿ ಮಾಡಿಕೊಂಡು ಕೀಳಾಗಿ ಮಾತನಾಡಿ, ವ್ಯಕ್ತಿಗತ ನಿಂದನೆ ಮಾಡುತ್ತಿದ್ದಾರೆ. ಮೇಲ್ಮನೆ ವಿರೋಧ ಪಕ್ಷದ ನಾಯಕರಾದ ಹರಿಪ್ರಸಾದ್ ಅವರು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸಿ.ಟಿ ರವಿ ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದರು.
ಅವರೊಬ್ಬ ಕುಡುಕ, ಗಾಂಜಾ ಹೊಡೀತಾರೆ ಎಂದಿದ್ದಾರೆ. ಸಿದ್ದರಾಮಯ್ಯ ಕೂಡ ಅದೇ ದಾಟಿಯಲ್ಲಿ ಎಲ್ಲರನ್ನೂ ಮೂದಲಿಸುತ್ತಾರೆ ಎಂದು ಟೀಕಿಸಿದರು. ಹರಿಪ್ರಸಾದ್ ಅವರು ಯಾಕೆ ಈ ರೀತಿ ಸಣ್ಣತನಕ್ಕೆ ಇಳಿದಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನಿಮ್ಮನ್ನು ನಾವು ಕುಡುಕರು ಅಂತ ಹೇಳುವುದಿಲ್ಲ. ನೀವು ಕುಡೀತೀರೋ ಇಲ್ಲವೋ ನನಗೂ ಗೊತ್ತಿಲ್ಲ. ನೀವು ಗಾಂಜಾ ಹೊಡೀತೀರಾ ಅಂತ ಗೊತ್ತಿಲ್ಲ; ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.
ನಾವು ತಿಳಿದುಕೊಂಡಂತೆÉ ನೀವು ಹಿರಿಯ ರಾಜಕಾರಣಿ. ಸುಮಾರು 18 ವರ್ಷ ರಾಜ್ಯಸಭೆಯಲ್ಲಿ ಇದ್ದು ಬಂದವರು. ಹೀಗೆಲ್ಲ ಇದ್ದರೂ ನೀವ್ಯಾಕೆ ಇಷ್ಟು ಕೀಳುಮಟ್ಟಕ್ಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು. ನೀವು ಸಿ.ಟಿ ರವಿ ಅವರನ್ನು ಕುಡುಕ ಅನ್ನುತ್ತೀರಿ. ಅವರು ನಿಮ್ಮ ಜೊತೆ ಯಾವಾಗಾದ್ರೂ ಕುಡಿದಿದ್ರಾ.? ಎಂದು ಪ್ರಶ್ನಿಸಿದರು.
ನಿಮ್ಮ ಜೊತೆ ಅವರು ಕುಡಿದಿದ್ರೆ ನಮ್ಮ ಜೊತೆ ಕುಡಿದಿದ್ದ ಅಂತ ಹೇಳಿ. ಗಾಂಜಾ ಹೊಡೆದಿದ್ರೆ ನೋಡಿದ್ದರೆ ಹೇಳಿ. ಇಂಥ ಕೆಟ್ಟ ಸಂಸ್ಕøತಿಯನ್ನು ಈ ದೇಶದ ಜನ ಒಪ್ಪುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಮಾತುಗಳನ್ನು ಬದಲಿಸಿಕೊಳ್ಳುವುದು ಅತ್ಯಂತ ಮುಖ್ಯವಾದುದು ಎಂದು ಆಗ್ರಹಿಸಿದರಲ್ಲದೆ ಕಾಂಗ್ರೆಸ್ ಪಕ್ಷದವರ ಕೀಳು ಅಭಿರುಚಿಯಿಂದಲೇ ಆ ಪಕ್ಷ ನೆಲಕಚ್ಚಿದೆ ಎಂದು ತಿಳಿಸಿದರು.
ಮದ್ಯ ಸೇವಿಸುವಂತಿಲ್ಲ ಎಂದು ಕಾಂಗ್ರೆಸ್ ಸಂವಿಧಾನದಲ್ಲೇ ಇದೆ. ಅಂಥವರಿಗೆ ಕಾಂಗ್ರೆಸ್ನಲ್ಲಿ ಸದಸ್ಯತ್ವ ಕೊಡುವುದಿಲ್ಲ. ಕಾಂಗ್ರೆಸ್ನಲ್ಲಿ ಯಾರೂ ಕುಡಿಯುವುದಿಲ್ಲವೇ? ಸಿದ್ದರಾಮಯ್ಯ, ಡಿಕೆಶಿ, ನೀವು, ಬೇರೆಯವರು ಯಾರೂ ಕುಡಿಯುವುದಿಲ್ಲವೇ? ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಮೇಲೆ ಅಪಾದನೆ ಮಾಡಿದ್ದರಲ್ಲವೇ? ಅದನ್ಯಾಕೆ ತಿರುಚಿ ಸಿ.ಟಿ.ರವಿ ಮೇಲೆ ಹೇಳ್ತಿದ್ದೀರಾ? ರಾಹುಲ್ ಗಾಂಧಿಯವರನ್ನು ಕುಡುಕ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಳಲಾಗಿದೆ. ಡ್ರಗ್ ಪೆಡ್ಲರ್ ಅಂದಿದ್ದಾರೆ. ನಾವು ಅದನ್ನೆಲ್ಲ ಹೇಳುವುದಿಲ್ಲ. ನಿಮಗೆ ತಾಕತ್ತಿದ್ದರೆ ರಾಹುಲ್ ಗಾಂಧಿಯವರನ್ನು ನೀವೇ ಕೇಳಿ ಎಂದು ಸವಾಲೆಸೆದರು.
ಕಾಂಗ್ರೆಸ್ ನಲ್ಲಿ ಕುಡುಕರಿಗೆ ಸದಸ್ಯತ್ವ ಕೊಡಲ್ಲ ಅಂತಿದೆ. ಆದ್ರೆ ಇಡೀ ಕಾಂಗ್ರೆಸ್ ರಾತ್ರಿ ಕುಡಿದು ಮಲಗುತ್ತೆ. ಆದ್ರೆ ನಾನು ಕಾಂಗ್ರೆಸ್ನಲ್ಲಿ ಇದ್ದು ಬಂದವನು. ನಿಮ್ಮ ಎಲ್ಲಾ ವಿಚಾರ ನನಗೆ ಗೊತ್ತು, ಇಲ್ಲಿಗೆ ಬಂದೆ ಅಂತ ನಾನು ಮಾತನಾಡುವುದಿಲ್ಲ. ಗಾಜಿನಮನೆಯಲ್ಲಿ ಕುಳಿತು, ಕಂಡವರ ಮೇಲೆ ಕಲ್ಲು ಹೊಡೆಯುವ ಕೆಲಸ ಮಾಡಬೇಡಿ ಎಂದು ತಿಳಿಸಿದರು.
ನಿಮ್ಮ ಚರಿತ್ರೆಗಳನ್ನು ಹಿಂದೆ ತಿರುಗಿ ನೋಡಿ. ನಿಮಗೆ ಅಂಟಿಕೊಂಡ ಜಾಡ್ಯಗಳೇನು ಎಂದು ನೋಡಿ. ಜನ ನಿಮ್ಮನ್ನು ಯಾವರೀತಿ ಗುರುತಿಸ್ತಾರೆ ಎಂದು ನೋಡಿಕೊಳ್ಳಿ. ಇದನ್ನು ಗಮನಿಸಿದ ಬಳಿಕ ಬೇರೆಯವರ ಕುರಿತು ಮಾತನಾಡಿ ಎಂದು ತಿಳಿಸಿದರು.
ಊಟ ಮಾಡೋದು, ಕುಡಿಯೋದು ಅವರವರ ಸ್ವಂತ ವಿಷಯ. ಅದನ್ನು ರಾಜಕೀಯಕ್ಕೆ ತರುವುದು ಸರಿಯಲ್ಲ. ನಿಮ್ಮ ಲೆವೆಲ್ಲಿಗೆ ಇದು ಸರಿಯಾ ಅಂತ ಪ್ರಶ್ನೆ ಮಾಡಿಕೊಳ್ಳಿ. ಇಂಥವುಗಳಿಗೆ ತೆರೆ ಎಳೆಯಿರಿ ಎಂದು ಆಗ್ರಹಿಸಿದರು.
ಚುನಾವಣೆ ಹತ್ತಿರ ಬರುತ್ತಿದೆ. ಜನರು ಎಲ್ಲರನ್ನು ತಕ್ಕಡಿಯಲ್ಲಿಟ್ಟು ತೂಗುವ ಕೆಲಸ ಮಾಡುತ್ತಾರೆ. ನಿಮ್ಮ ಪರಂಪರೆ ಬದಲಿಸಿಕೊಳ್ಳದಿದ್ದರೆ ನಿಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಎಚ್ಚರಿಸಿದರು.
BIGG NEWS : ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ: ಜ.12 ಕ್ಕೆ ಹೈಕೋರ್ಟ್ ನಲ್ಲಿ ವಿಚಾರಣೆ