ಬೆಳಗಾವಿ: ನಮ್ಮ ಪ್ರಥಮ ಆದ್ಯತೆ ರೈತರಿಗೆ ಪರಿಹಾರ ನೀಡುವುದೇ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದು ಅಲ್ಲ. ನಾನು ನೀರಾವರಿ ಸಚಿವನಾದ ಮೇಲೆ ನಾಲ್ಕು ನಿಗಮದಲ್ಲಿ ರಿವಾಲ್ವಿಂಗ್ ಪದ್ಧತಿಯಲ್ಲಿ ಹಣ ಇಟ್ಟಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ನಡೆದ ಪ್ರಶ್ನೋತ್ತರ ವೇಳೆ ಸದಸ್ಯ ಸೂರಜ್ ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮಾವತಿ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಪರಿಹಾರ ನೀಡಲು ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೂರಜ್ ರೇವಣ್ಣ ಅವರು ತಾತನ ರೀತಿಯಲ್ಲಿ ಸರಿಯಾಗೇ ತಯಾರಾಗಿ ಬಂದಿದ್ದಾರೆ. ಈ ಭೂಸ್ವಾಧೀನ ಸಮಸ್ಯೆಗಳು ಹಾಸನ ಜಿಲ್ಲೆಯಲ್ಲಿದ್ದಷ್ಟು ಯಾವುದೇ ಜಿಲ್ಲೆಯಲ್ಲಿಲ್ಲ. ಸ್ಕೀಂಗಳು ಆಗಬೇಕು, ರೈತರಿಗೆ ಸೌಲಭ್ಯಗಳು ಸಿಗಬೇಕು, ನೀರಾವರಿ ಯೋಜನೆಗಳು ಆಗಬೇಕು ಅಂತಾ ಹೇಳ್ತಾರೆ. ಆದ್ರೆ, ಒಂದಿಂಚೂ ನೆಲವನ್ನು ಬಿಟ್ಟುಕೊಡಲ್ಲ ಎಂದರು.
ರೈತರಿಗೆ ಪರಿಹಾರ ಕೊಡಲು ನಿಮ್ಮಲ್ಲಿ ಹಣ ಇಲ್ಲ ಎಂದು ಆರೋಪಿಸಿದ್ದಾರೆ. ಆದರೆ, ನಾನು ನೀರಾವರಿ ಸಚಿವನಾದ ಮೇಲೆ ನಾಲ್ಕು ನಿಗಮದಲ್ಲಿ ರಿವಾಲ್ವಿಂಗ್ ಪದ್ಧತಿಯಲ್ಲಿ ಹಣ ಇಟ್ಟಿದ್ದೇವೆ. ನಮ್ಮ ಪ್ರಥಮ ಆದ್ಯತೆ ರೈತರಿಗೆ ಪರಿಹಾರ ನೀಡುವುದೇ ಹೊರತು ಗುತ್ತಿಗೆದಾರರಿಗೆ ಹಣ ಕೊಡುವುದು ಅಲ್ಲ. ಇದೇ ರೀತಿ ನಾವು ಕಾರ್ಯನಿರ್ವಹಿಸಿದ್ದೇವೆ. ಯಾವುದಾದರೂ ಎಸ್ಎಲ್ಒ ಖಾತೆಯಲ್ಲಿ ಹಣ ಇಲ್ಲ ಅಂತಾ ಹೇಳಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಏನಾದ್ರೂ ಲೋಪ ಆಗಿದ್ದರೆ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ. ಏನೇ ಸಮಸ್ಯೆಗಳು ಇದ್ದರೂ ತಕ್ಷಣ ಸರಿಪಡಿಸ್ತೀನಿ ಎಂದರು.
ವಿದ್ಯುತ್ ಬಿಲ್ಗಳ ಬಾಕಿ ಬಗ್ಗೆ ಮಾತನಾಡಿ, ನಮ್ಮಲ್ಲಿ ನಿರ್ವಹಣಾ ವೆಚ್ಚ ಬಹಳ ಕಡಿಮೆ ಇರುತ್ತದೆ. ಬಹಳ ಹಳೇ ದರ ನಿಗದಿಯಾಗಿವೆ. ಅದರ ಬಗ್ಗೆನೂ ಯೋಚನೆ ಮಾಡ್ತೀವಿ. ಮೊದಲು ಕಾಲುವೆ ಮೂಲಕ ನೀರಾವರಿ ಮಾಡ್ತಿದ್ದೇವು. ಖರ್ಚು ವೆಚ್ಚ ಕಡಿಮೆ ಆಗುತ್ತಿತ್ತು. ಆದರೆ, ಇಂದು ಏತ ನೀರಾವರಿ ಯೋಜನೆಗೆ 10 ಪಟ್ಟು ಹೆಚ್ಚು ಖರ್ಚಾಗುತ್ತದೆ. ಈಗ ವಿದ್ಯುತ್ ಬಿಲ್ ಬಾಕಿಯಿದೆ. ಹಂತ ಹಂತವಾಗಿ ಬಿಲ್ ಪಾವತಿ ಮಾಡುತ್ತಿದ್ದೇವೆ. ಆದರೆ, ವಿದ್ಯುತ್ ನಿಗಮದವರು ಕೂಡ ನಮ್ಮ ಇಲಾಖೆಗೆ ಬಾಕಿ ಕೊಡಬೇಕಾಗಿದೆ ಎಂದು ಹೇಳಿದರು.
ಇನ್ನು, ಕೃಷ್ಣ ನದಿ ಭಾಗದ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎಂದು ಪ್ರಕಾಶ್ ರಾಥೋಡ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಲ್ಹಾರ್ ವ್ಯಾಪ್ತಿಯಲ್ಲಿ ಈ ರೀತಿ ಪ್ರಕರಣಗಳು ಹೆಚ್ಚಿವೆ. ಅದು ಬಹಳ ದೊಡ್ಡ ಹಳ್ಳಿ, ಅಲ್ಲಿ ಸಿಎ ಸೈಟ್ ಹಾಗೂ ಗಾರ್ಡನ್ಗೆ ಬಿಟ್ಟ ಜಾಗವನ್ನು ಕೆಲವರು ಅಕ್ರಮವಾಗಿ ಬೋಗಸ್ ಹಕ್ಕು ಪತ್ರ ತಯಾರು ಮಾಡಿ, 1117ರಷ್ಟು ಬೇರೆಯವರಿಗೆ ವಿತರಣೆ ಮಾಡಿದ್ದಾರೆ. ಹಣ ತಗೊಂಡು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ ಎಂದು ಹೇಳಿದರು.
BREAKING NEWS : ‘PGCET’ ಫಲಿತಾಂಶ ಪ್ರಕಟ ; ಈ ರೀತಿ ನಿಮ್ಮ ರಿಸಲ್ಟ್ ಚೆಕ್ ಮಾಡಿ |Karnataka PGCET Result 2022
BREAKING NEWS : ಸುವರ್ಣಸೌಧದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ಆರಂಭ