ತಮಿಳುನಾಡು : ದಲಿತರಿಗಾಗಿ ಮೀಸಲಿಡಲಾಗಿದ್ದ 10,000 ಲೀಟರ್ ತುಂಬುವ ʻನೀರಿನ ತೊಟ್ಟಿಗೆ ಮಾನವರ ಮಲ ಸುರಿದು ವಿಕೃತಿʼ ಮೆರೆದ ತಮಿಳುನಾಡಿನ ಗ್ರಾಮದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ.
ಈ ನೀರನ್ನು ಸೇವಿಸುತ್ತಿದ್ದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆಂದು ಗ್ರಾಮದ ರಾಜಕೀಯ ಕಾರ್ಯಕರ್ತ ಮೋಕ್ಷ ಗುಣವಲಗನ್ ಹೇಳಿಕೆ ನೀಡುವ ಮೂಲಕ ಅರೋಪ ಮಾಡಿದ್ದರು. ಬಳಿಕ ಪುದುಕೊಟ್ಟೈ ಡಿಸಿ ಕವಿತಾ ರಾಮು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಂದಿತಾ ಪಾಂಡೆ ಇರಾಯೂರ್ ಗ್ರಾಮಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಕುಡಿಯುವ ನೀರು ಹಳದಿ ಬಣ್ಣಕ್ಕೆ ತಿರುಗುವಷ್ಟು ಅಪಾರ ಪ್ರಮಾಣದ ಮಲವನ್ನು ನೀರಿನ ತೊಟ್ಟಿಗೆ ಸುರಿದಿರುವುದು ಕಂಡುಬಂದಿದೆ.
ಕೆಲ ದಿನಗಳಿಂದ ಗ್ರಾಮದಲ್ಲಿ ಅನೇಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಕುಡಿಯುವ ನೀರಿನಲ್ಲಿ ಸಮಸ್ಯೆಯಿರಬಹುದು ಎಂದು ವೈದ್ಯರು ಸೂಚಿಸಿದ ಬಳಿಕ ಗ್ರಾಮಸ್ಥರು ನೀರಿನ ಟ್ಯಾಂಕ್ ಹತ್ತಿ ಪರಿಶೀಲಿಸಿದ್ದಾರೆ. ಈ ವೇಳೆ ವಿಕೃತ ಕೃತ್ಯ ಬೆಳಕಿಗೆ ಬಂದಿದೆ.