ಧಾರವಾಡ: ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳನ್ನು ನಿರ್ಭಂಧಿಸಲಾಗಿತ್ತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಆರ್ಥಿಕ, ವಾಣಿಜ್ಯ, ಚುಟವಟಿಕೆಗಳು ಪುನರಾರಂಭಗೊಂಡು, ಚೈತನ್ಯ ಪಡೆದಿವೆ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಅಥವಾ ತಡೆಯುವ ಯೋಚನೆ ಸರ್ಕಾರದ ಮುಂದೆ ಇಲ್ಲಾ ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಡಿ. ಸುಧಾಕರ ಅವರು ಹೇಳಿದರು.
ಧಾರವಾಡ ಜಿಲ್ಲಾಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ನಿರ್ವಹಣೆಗಾಗಿ ಮಾಕ್ ಡ್ರಿಲ್ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಅನಗತ್ಯವಾಗಿ ಸಾರ್ವಜನಿಕರು ಗೊಂದಲಗಳಿಗೆ ಒಳಗಾಗಬಾರದು. ಸರ್ಕಾರವು ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸಲಹಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಎಲ್ಲರೂ ಕಡ್ಡಾಯವಾಗಿ ಮೂರು ಡೋಸ್ ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು ಮತ್ತು ಒಳಾಂಗಣದಲ್ಲಿರುವ ಆಸನಗಳಿಗೆ ಮಾತ್ರ ಅವಕಾಶ ನೀಡಿ, ಸುರಕ್ಷಿತ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಶಾಲಾ, ಕಾಲೇಜು, ಬಸ್, ರೈಲು, ಸಂತೆ, ಜಾತ್ರೆ ಇತ್ಯಾದಿಗಳಲ್ಲಿ ತಪ್ಪದೇ ಮಾಸ್ಕ್ ಧರಿಸುವುದನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಚಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಆಯಾ ಜಿಲ್ಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಜೀವವೂ ಮುಖ್ಯ ಮತ್ತು ಜೀವನವೂ ಮುಖ್ಯ. ಸುರಕ್ಷಿತ ಆರೋಗ್ಯ ಕ್ರಮಗಳನ್ನು ಅನುಸರಿಸುವುದರೊಂದಿಗೆ ತಮ್ಮ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಮುಂದುವರಿಸಬಹುದು. ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಅಥವಾ ತಡೆಹಿಡಿಯುವ ಯಾವ ಯೋಜನೆ, ಯೋಚನೆ ಸರ್ಕಾರದ ಮುಂದಿಲ್ಲ. ಕೋವಿಡ್ ರೂಪಾಂತರಿ ಬಿ.ಎಫ್.7 ಸೋಂಕು ಬಂದರೂ ಅದನ್ನು ಸಮರ್ಪಕವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ ಎಂದು ಸಚಿವರು ತಿಳಿಸಿದರು. ಕೋವಿಡ್ದೊಂದಿಗೆ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಅದು ಜೀವನದ ಒಂದು ಭಾಗವಾಗುತ್ತಿದ್ದು, ಮುಂಜಾಗೃತಾ ಕ್ರಮಗಳೊಂದಿಗೆ ಬದುಕಬೇಕಿದೆ ಎಂದು ಸಚಿವರು ಹೇಳಿದರು.
ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಯಂಗೊಳಿಸಲು ನೇಮಕಾತಿ ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ರಾಷ್ಟ್ರೀಯ ಆರೋಗ್ಯ ಅಭಿಯಾನ ಇರುವವರೆಗೆ ಮಾತ್ರ ಆವರ ಕೆಲಸವಿರುತ್ತದೆ. ಈ ಕುರಿತು ಅವರ ಒಪ್ಪಂದ ಪತ್ರದಲ್ಲಿಯೇ ಇದೆ. ಕೋವಿಡ್ ತೀವೃವಾದಾಗ 10 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ರಾಜ್ಯ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈಗಲೂ ಅಗತ್ಯಬಿದ್ದರೆ ಮತ್ತೆ ಈ ಕುರಿತು ಕ್ರಮವಹಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿ ವಿವಿಧ ರೀತಿ ವೈದ್ಯ ಹಾಗೂ ವೈದ್ಯಯೇತರ ಸಿಬ್ಬಂದಿಗಳ ಖಾಯಂ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರು ಸರ್ಕಾರವು ಡಿ. 26 ರಂದು ಬಿಡುಗಡೆ ಮಾಡಿರುವ ಸಲಹಾತ್ಮಕ ಆರೋಗ್ಯ ಸುರಕ್ಷತಾ ಕೋವಿಡ್ ಮಾರ್ಗಸೂಚಿಗಳನ್ನು ಸ್ವಯಂ ಪ್ರೇರಣೆಯಿಂದ ಪಾಲಿಸಬೇಕೆಂದು ಸಚಿವರ ವಿನಂತಿಸಿದರು.
ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್ಎಂಓ) ಟ್ಯಾಂಕ್ ನಿರ್ಮಾಣಕ್ಕೆ ತುರ್ತು ಕ್ರಮವಹಿಸಿದ ಧಾರವಾಡ ಜಿಲ್ಲಾ ಆಸ್ಪತ್ರೆಯ ಆರೋಗ್ಯ ಮತ್ತು ಇಂಜಿನೀಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನೀಯರ್ ಅವರನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸಚಿವರು ಒಂದು ವಾರದಲ್ಲಿ ಕ್ರಮವಹಿಸಿ, ವರದಿ ನೀಡುವಂತೆ ಸೂಚಿಸಿದರು.