ಬೆಳಗಾವಿ : ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಗೊಂಡ ಫಲಾನುಭವಿಗಳಿಗೆ ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ಆಧಾರ್ ಜೋಡಣೆಗೊಂಡ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ.3.12 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.
ವಿಧಾನಪರಿಷತ್ ನಲ್ಲಿ ಶಾಸಕ ಕೆ.ಜಿ.ಬೋಪಯ್ಯ ಪ್ರಶ್ನಗೆ ಉತ್ತರಿಸಿದ ಸಚಿವರು, 2019-20 ರಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ ವಿವಿಧ ವಸತಿ ಯೋಜನೆಯಡಿ ಒಟ್ಟು 2852 ಮನೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 81 ಮನೆಗಳು ಪೂರ್ಣಗೊಂಡಿದ್ದು, 1008 ಮನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದರು.
ಈ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆಯೇ, ಫಲಾನುಭವಿಗಳ ಖಾತೆಗೆ ಈವರೆಗೆ ಬಿಡುಗಡೆ ಮಾಡಿರುವ ಹಣ ಎಷ್ಟು, ಈ ಯೋಜನೆಗಳಡಿ ಕಳೆದ ಮೂರು ವರ್ಷಗಳಿಂದ ಈವರೆಗೆ ಗುರುತಿಸಲಾದ ಫಲಾನುಭವಿಗಳ ಪೈಕಿ ಎಷ್ಟು ಮನೆಗಳನ್ನು ಬ್ಲಾಕ್ ಮಾಡಲಾಗಿದೆ, ಬ್ಲಾಕ್ ಮಾಡಲು ಕಾರಣವೇನು, ಬ್ಲಾಕ್ ಮಾಡಲಾದ ಫಲಾನುಭವಿಗಳನ್ನು ಅನ್ಬ್ಲಾಕ್ ಮಾಡಲು ಕೈಗೊಂಡಿರುವ ಕ್ರಮಗಳೇನು, ಎಷ್ಟು ಸಮಯದಲ್ಲಿ ಅನ್ಬ್ಲಾಕ್ ಮಾಡಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಶಾಸಕರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿ.ಸೋಮಣ್ಣ ಅವರು 2019-20 ರಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಗೊಂಡ ಫಲಾನುಭವಿಗಳಿಗೆ ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ಆಧಾರ್ ಜೋಡಣೆಗೊಂಡ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರೂ.3.12 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗಳಡಿ ಯಾವುದೇ ಮನೆಗಳನ್ನು ಬ್ಲಾಕ್ ಅಥವಾ ರದ್ದುಗೊಳಿಸಿರುವುದಿಲ್ಲ. ಆದರೆ ಹೆಸರು ಡೂಪ್ಲಿಕೇಟ್ ಆಗಿರುವ ಕಾರಣ ಒಟ್ಟು 20 ಫಲಾನುಭವಿಗಳ ಅನುದಾನ ಬಿಡುಗಡೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಇಂತಹ ಪ್ರಕರಣಗಳಲ್ಲಿ ಡ್ಯೂಪ್ಲಿಕೇಟ್ ತೆರವುಗೊಳಿಸಲು ಆಯಾಯ ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಹಂತದಲ್ಲಿಯೇ ಪರಿಶೀಲಿಸಿ ಸರಿಪಡಿಸಲು ಅವಕಾಶ ಕಲ್ಪಿಸಿದ್ದು, ಶಿಫಾರಸ್ಸುಗೊಂಡ ಪ್ರಕರಣಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.