ಮಂಡ್ಯ : ದೇಶದ ಭವಿಷ್ಯ ರೂಪುಗೊಳ್ಳುವುದು ವಿಧಾನಸೌಧ, ಪಾರ್ಲಿಮೆಂಟ್, ಹೈಕೋರ್ಟ್ ಅಥವಾ ಸುಪ್ರಿಂ ಕೋರ್ಟ್ ಗಳಲ್ಲಿ ಅಲ್ಲ ಶಾಲಾ ಕೊಠಡಿಗಳಲ್ಲಿ ಮಾತ್ರವಾಗಿದೆ ಎಂದು ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಪ್ರೋ. ಎಂ. ಕೃಷ್ಣೇಗೌಡ ಹೇಳಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಬಳಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಮದ್ದೂರು ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಅಭಿನಂದಿಸಿ ಮಾತನಾಡಿದರು.
ಭವಿಷ್ಯದಲ್ಲಿ ಶಿಕ್ಷಕರಿಗೆ ತಂತ್ರಜ್ಞಾನ ಮಾರಕವಾಗಲಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಲ್ಲದ ಶಿಕ್ಷಣವನ್ನು ಸಮಾಜ ಕಾಣಲಿದೆ ಹಾಗೂ ಶಿಕ್ಷಕರಿಗೆ ಭವಿಷ್ಯವಿರುವುದು ನನಗೆ ಕಾಣುತ್ತಿಲ್ಲ. ಟೆಕ್ನಾಲಜಿ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನಡೆಯುತ್ತಿದೆ ಎಂದರೆ 15 ವರ್ಷದಲ್ಲಿ ಶಿಕ್ಷಕರು ಏಕೆ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಆಶ್ಚರ್ಯವಿಲ್ಲ. ನಾವು ಇಲ್ಲದೆ ಶಿಕ್ಷಣ ಪೂರ್ಣವಾಗಲ್ಲ ಎಂಬುದನ್ನು ಶಿಕ್ಷಕರು ಸಾಬೀತು ಮಾಡುವ ಸಮಯ ಬಂದಿದೆ ಎಂದು ಸಾಹಿತಿ ಪ್ರೋ.ಕೃಷ್ಣೆಗೌಡ ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಶೇ.10 ರಷ್ಟಿದ್ದ ವಿದ್ಯಾವಂತರ ಸಂಖ್ಯೆ ಇಂದು ಶೇ.90 ರಷ್ಟಾಗಿದೆ. ಇದರಿಂದ ನಮ್ಮ ದೇಶದಲ್ಲಿ ವ್ಯಾಸಂಗ ಮಾಡಿದ ಹಲವಾರು ಪ್ರತಿಭೆಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ ಇದರಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾವಿರಾರು ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಅಭಿನಂದನೆ ಸಲ್ಲಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದ್ದು, ಈ ಮೂಲಕ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಶಿಕ್ಷಕರ ಜಬಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಶಿಕ್ಷಕರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕೆಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಕದಲೂರು ಉದಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದಲ್ಲಿ ಶಿಕ್ಷಣಕ್ಕೆ ದೊಡ್ಡ ಶಕ್ತಿಯಿದೆ. ಆಸ್ತಿ, ಐಶ್ವರ್ಯ, ಹಣ ಸೇರಿದಂತೆ ಎಲ್ಲಾ ಸಂಪತ್ತನ್ನು ಬೇರೆಯವರು ಖದೀಯಬಹುದು. ಆದರೆ ಜ್ಞಾನವನ್ನು ಯಾರು ಖದೀಯಲು ಸಾಧ್ಯವಿಲ್ಲ. ಇಂತಹ ಜ್ಞಾನವನ್ನು ನೀಡುತ್ತಿರುವ ಗುರುವೃಂದವನ್ನು ಜೀವನದಲ್ಲಿ ಯಾರು ಮರೆಯಲು ಸಾಧ್ಯವಿಲ್ಲ ಎಂದರು.
ಶಿಕ್ಷಕರು ಮಕ್ಕಳಿಗೆ ಕಲಿಸುವ ವಿದ್ಯೆ ಮತ್ತು ಜ್ಞಾನ ಶಾಶ್ವತವಾಗಿರುತ್ತದೆ. ಸಮಾಜದ ಒಳಿತಿಗಾಗಿ ಶಿಕ್ಷಕರು ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರ ಸೇವೆ ಅನನ್ಯವಾಗಿದ್ದು ಪ್ರತಿಯೊಬ್ಬರು ಜೀವನದಲ್ಲಿ ಯಶಸ್ವಿಯಾಗಲು ಹಾಗೂ ಮಹಾನ್ ಸಾಧನೆ ಮಾಡಲು ಗುರುಗಳ ಪಾತ್ರ ಮಹತ್ವವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಸಹ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು. ಆ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿದ್ದ ಅವ್ಯವಸ್ಥೆಗಳನ್ನು ಹತ್ತಿರದಿಂದ ನೋಡಿದ್ದೇ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚಬಾರದು, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಗಳ ಉಳಿವಿಗೆ ಹಲವಾರು ಯೋಜನೆಗಳನ್ನು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಟ್ರಸ್ಟ್ ವತಿಯಿಂದ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಎರಡು ತಿಂಗಳಿಂದ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ 5,7 ಮತ್ತು 10 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡಿದಾಗ ಹಾಗೂ ಇಂದು ಆಯೋಜಿಸಿರುವ ಗುರುವಂದನಾ ಕಾರ್ಯಕ್ರಮಕ್ಕೆ ಶಿಕ್ಷಕರು ಹೋಗದಂತೆ ಕೆಲವರು ಒತ್ತಡ ಹಾಕಿದ್ದಾರೆ. ಅದು ನನ್ನ ಗಮನಕ್ಕೆ ಬಂದಿದೆ. ಆದರೂ, ಇಷ್ಟೊಂದು ಸಂಖ್ಯೆಯಲ್ಲಿ ಶಿಕ್ಷಕರು ಗುರುವಂದನಾ ಕಾರ್ಯಕ್ರಮಕ್ಕೆ ಬಂದಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬಾಲಸುಬ್ರಮಣ್ಯಂ, ಯದುಶೈಲ, ರಾಮಚಂದ್ರ, ಕುಮಾರ್, ಜೋಗಿಗೌಡ, ಸತೀಶ್, ಕೃಷ್ಣ, ಮದ್ದುಶೆಟ್ಟಿ, ಜ್ಞಾನೇಂದ್ರ, ಗೋಪಾಲ, ನಾರಾಯಣಸ್ವಾಮಿ, ಶಿವಕುಮಾರ್, ಭೈರೇಗೌಡ, ಶಿವಲಿಂಗಯ್ಯ ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ವಿನುತ ಉದಯ್, ಕೆ.ಎಂ.ರವಿ, ದಿನೇಶ್ ಬಾಬು, ಸಿಪಾಯಿ ಶ್ರೀನಿವಾಸ್, ಕೆಐಎಡಿಬಿ ನಿವೃತ್ತ ಅಧಿಕಾರಿ ಶಂಕರೇಗೌಡ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಅಂಕೇಗೌಡ ಹಾಗೂ ವಿಕ್ರಮ್ ವಿಜಯ್, ಗೊರವನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಧುಕುಮಾರ್, ಸದಸ್ಯ ತಿಮ್ಮೇಗೌಡ, ಸತೀಶ್, ಯತೀಶ್, ಶಿವು, ಮನು, ಮಧು, ಹರೀಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ